ಕುಂದಾಪುರ ಕ್ಷೇತ್ರ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳು, ಪಿಡಿಒ ಹಾಗೂ ಆಡಳಿತಾಧಿಕಾರಿಗಳ ಸಭೆ ನಡೆಯಿತು. ವಿವಿಧ ತಾಲೂಕುಗಳ ತಹಸೀಲ್ದಾರ್‌ಗಳು ಭಾಗವಹಿಸಿದ್ದರು.
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸುಳ್ಳು ಹೇಳಬೇಡಿ. ಪುರಸಭೆ ವ್ಯಾಪ್ತಿಯಲ್ಲಿ 5-6 ದಿನ ಯಾರಿಗೂ ಕುಡಿಯುವ ನೀರು ಇರಲಿಲ್ಲ. ಇದನ್ನು ಬಗೆಹರಿಸಲು 6-7 ದಿನ ತೆಗೆದುಕೊಂಡಿದ್ದೀರಿ. ನಿಮಗೆ ಹಣ ಬಾಕಿ ಇದೆ ಎಂದು ನೀರು ಕೊಡದಿರಲು ಸಾಧ್ಯವೇ? ಅದು ನಿಮಗೂ ಪುರಸಭೆಗೆ ಬಿಟ್ಟ ವಿಚಾರ. ಕುಡಿಯುವ ನೀರಿನ ಪೂರೈಕೆ ಟೆಂಡರ್ ಪಡೆದ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳು, ಗ್ರಾಪಂ ಪಿಡಿಒ ಹಾಗೂ ಆಡಳಿತಾಧಿಕಾರಿಗಳ ಸಭೆಯಲ್ಲಿ ಶಾಸಕರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಬೇಸಿಗೆಯಲ್ಲಿ ಸಾಧ್ಯವಾದಷ್ಟು ಕುಡಿಯುವ ನೀರಿನ ಸರಬರಾಜು ಮಾಡಲು ಕ್ರಮಕೈಗೊಳ್ಳುವಂತೆ ಶಾಸಕರು ಸೂಚಿಸಿದರು. ಕೋಟೇಶ್ವರ ಗ್ರಾಪಂ ವ್ಯಾಪ್ತಿಯಲ್ಲಿ ಪೈಪ್‌ಲೈನ್ ನಿರ್ಮಿಸುವ ಸಂಬಂಧ ಕಳೆದ ಮೂರು ಸಭೆಗಳಿಂದ ಹೇಳುತ್ತಾ ಬಂದಿದ್ದರೂ ಈವರೆಗೆ ಪೈಪ್‌ಲೈನ್ ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲವೇ ಎಂದು ಶಾಸಕರು ಪ್ರಶ್ನಿಸಿದರು.
ಬಸ್ರೂರು ಹಾಗೂ ಕಂದಾವರ ಗ್ರಾಪಂಗಳಿಗೆ ಬೆಳಗ್ಗೆ 10 ಗಂಟೆವರೆಗೆ ನೀರು ಸರಬರಾಜು ಮಾಡುವಂತೆ ಸ್ಥಳೀಯ ಪಿಡಿಒಗಳು ಆಗ್ರಹಿಸಿದರು. ಕುಂದಾಪುರ ಪುರಸಭೆ ಮೂಲಕ ನೀರು ಸರಬರಾಜು ಮಾಡುತ್ತಿರುವ ಗ್ರಾಪಂಗಳ ವಾಟ್ಸಾೃಪ್ ಗ್ರೂಪ್ ರಚಿಸಿ, ಅದರಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುವಂತೆ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಸಲಹೆ ನೀಡಿದರು.
ಗೋಪಾಡಿ, ಕುಂಭಾಶಿಯಲ್ಲಿ ರಾ.ಹೆ. ವಿಸ್ತರಣೆಯಿಂದ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿಯಾಗಿ ಕೆಲವು ಪ್ರದೇಶಗಳಿಗೆ ನೀರು ನೀಡಲು ಆಗುತ್ತಿಲ್ಲ ಎಂದು ಪಿಡಿಒ ಹೇಳಿದರು.
ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಹೆಬ್ರಿ ತಹಸೀಲ್ದಾರ್ ಪ್ರಸಾದ್, ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ ಹೆಗ್ಡೆ, ಸಹಾಯಕ ನಿರ್ದೇಶಕ ದಿನೇಶ್, ನೀರಾವರಿ ಇಲಾಖೆಯ ಉದಯ ಕುಮಾರ್ ಶೆಟ್ಟಿ, ಕುಂದಾಪುರ ತಾಪಂ ಇಒ ಮಹೇಶ್, ಬ್ರಹ್ಮಾವರ ತಾಪಂ ಇಒ ಎಚ್.ವಿ.ಇಬ್ರಾಹಿಂಪುರ, ಬೈಂದೂರು ಇಒ ರಾಮಚಂದ್ರ ಮೊದಲಾದವರು ಉಪಸ್ಥಿತರಿದ್ದರು.
ಕಾಮಗಾರಿ ಕುರಿತು ಅಸಮಾಧಾನ
ಹೊಸದಾಗಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್‌ಗಳು ಸೋರಲು ಕಾರಣವೇನು? ಟ್ಯಾಂಕ್ ಸೋರಿಕೆ ಆಗಿ ದುರಸ್ತಿ ವಾಡಿದರೆ ಹೇಗೆ? ಕಳೆದ 25 ವರ್ಷಗಳ ಹಿಂದೆ ನಿರ್ಮಿಸಿದ ಟ್ಯಾಂಕ್‌ಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಶಾಸಕ ಕಿರಣ್ ಕುವಾರ್ ಕೊಡ್ಗಿ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.