ಶಿಕ್ಷಕರ ಸಂಘದಿಂದ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಯಿತು. ಕೆಎಂಕೆ ಮಂಜನಾಡಿ, ತ್ಯಾಗಂ ಹರೇಕಳ, ಡಾ.ಮಂಜುಳಾ ಶೆಟ್ಟಿ, ಶಿವಕುಮಾರ್ ಇದ್ದರು.  
ಉಡುಪಿ

ಅನುದಾನಿತ ಶಾಲೆಗಳಲ್ಲೂ ಆಂಗ್ಲಮಾಧ್ಯಮ

ಇಂದಿರಾ ಎನ್ ಕೆ
ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳು ಆಂಗ್ಲಮಾಧ್ಯಮವಾಗಿ ಪರಿವರ್ತನೆಯಾಗಿದ್ದು ಅದೇ ಮಾದರಿಯಲ್ಲಿ ಅನುದಾನಿತ ಕನ್ನಡ ಶಾಲೆಗಳಲ್ಲೂ ಆರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜು ಶಿಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ಪರವಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭವಾಗಿ ಒಂದನೇ ತರಗತಿಯಿಂದಲೇ ಆಂಗ್ಲಮಾಧ್ಯಮ ಬೋಧನೆಗೆ ದ್ವಿಭಾಷಾ ನೀತಿಯಂತೆ ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿದ್ದು ಪ್ರಾಥಮಿಕ ಶಾಲೆಯ ಎಲ್ಲ ಶಿಕ್ಷಕರಿಗೆ ತರಬೇತಿ ನಡೆಯುತ್ತಿದೆ. ಇದರಿಂದಾಗಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗುವ ಸಂಭವವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ ಅನುದಾನಿತ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿಯೂ ಮನವಿ ಮಾಡಲಾಗಿದೆ. ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜು ನೌಕರರ ಸಂಘ ಜಿಲ್ಲಾಧ್ಯಕ್ಷ ಕೆಎಂಕೆ ಮಂಜನಾಡಿ, ನಿಯೋಗದಲ್ಲಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ರಾಜ್ಯ ಕಾರ್ಯದರ್ಶಿ ತ್ಯಾಗಂ ಹರೇಕಳ, ಜಿಲ್ಲಾ ಪದಾಧಿಕಾರಿಗಳಾದ ಡಾ.ಮಂಜುಳಾ ಶೆಟ್ಟಿ, ಶಿವಕುಮಾರ್, ರವಿಶಂಕರ್ ಮೊದಲಾದವರು ಉಪಸ್ಥಿತರಿದ್ದರು.