ಶಿವಪುರದಲ್ಲಿ ಅತಿಕ್ರಮಣವಾಗಿರುವ ಸರ್ಕಾರಿ ಜಾಗ
ನರೇಂದ್ರ ಎಸ್. ಮರಸಣಿಗೆ ಹೆಬ್ರಿ
ಹೆಬ್ರಿ ತಾಲೂಕಿನ ಶಿವಪುರ ಗ್ರಾಮದಲ್ಲಿ ಶಿವಪುರ ಪೇಟೆ ಸಮೀಪದಲ್ಲೇ ಬೆಲೆಬಾಳುವ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿ ಅಕ್ರಮವಾಗಿ ಕಟ್ಟಡವನ್ನು ನಿರ್ಮಾಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಶಿವಪುರ ಸೊಸೈಟಿ ಹಿಂಭಾಗದಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಜೆಸಿಬಿ ಯಂತ್ರದ ಮೂಲಕ ಭೂಮಿಯನ್ನು ಸಮತಟ್ಟುಗೊಳಿಸಲಾಗಿದೆ. ಇಲ್ಲಿನ ಸರ್ವೇ ನಂಬರ್ 245ರಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಗ್ರಾಮ ಲೆಕ್ಕಾಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಸರ್ಕಾರಿ ರಜಾ ದಿನದಂದೇ ಜಾಗವನ್ನು ಸಮತಟ್ಟು ಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ಮುಂದಾಗುವ ಮೂಲಕ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ. ಕಂದಾಯ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಜಾಗವನ್ನು ಕಂದಾಯ ಇಲಾಖೆಯ ಸರ್ಕಾರಿ ಉದ್ದೇಶಕ್ಕೆ ಮೀಸಲಿರಿಸುವಂತೆ ಕಂದಾಯ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ಶೀಘ್ರ ತೆರವು ಮಾಡಲು ಮನವಿ
ಶಿವಪುರ ಪೇಟೆಗೆ ಅತೀ ಸಮೀಪವೇ ಬೆಲೆಬಾಳುವ ಕಂದಾಯ ಭೂಮಿ ಅತಿಕ್ರಮಣವಾಗುತ್ತಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಅತಿಕ್ರಮಣ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ತಹಸೀಲ್ದಾರ್ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಚಾರದಲ್ಲೂ ಅತಿಕ್ರಮಣ
ಚಾರದ ಗೋಪಾಲಕೃಷ್ಣ ನಗರದಲ್ಲಿ ನಿವೇಶನ ಹಂಚಿಕೆಗೆ ಮೀಸಲಿರಿಸಿರುವ 4 ಎಕರೆ ಸರ್ಕಾರಿ ಭೂಮಿಯನ್ನು ಈಗಾಗಲೇ ಒತ್ತುವರಿ ಮಾಡಲಾಗಿದೆ. ಆದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಜಿಲ್ಲಾಧಿಕಾರಿ ಜಾಗ ಕಾಯ್ದಿರಿಸಲಿ
ಶಿವಪುರದಲ್ಲಿರುವ ಸರ್ಕಾರಿ ಜಾಗವನ್ನು ಜಿಲ್ಲಾಧಿಕಾರಿ ತಮ್ಮ ವಿಶೇಷ ಅಧಿಕಾರ ಬಳಸಿ ಕಾಯ್ದಿರಿಸಬೇಕು. ಕಂದಾಯ ಇಲಾಖೆಯವರು ಯಾವಾಗ ಕೇಳಿದರೂ ಶಿವಪುರದಲ್ಲಿ ಜಾಗ ಇಲ್ಲ ಎನ್ನುತ್ತಾರೆ. ಅತಿಕ್ರಮಣವಾಗಿರುವ ಜಾಗವನ್ನು ತೆರವು ಮಾಡಿ ಕಾಯ್ದಿರಸಬೇಕೆಂದು ಸ್ಥಳೀಯ ನಿವಾಸಿ ಮಂಜುನಾಥ್ ಭಟ್ ಆಗ್ರಹಿಸಿದ್ದಾರೆ.
ಕಂದಾಯ ಅಧಿಕಾರಿಗಳು ತೋರಿದ ನಿರ್ಲಕ್ಷೃದಿಂದಾಗಿಯೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಜಾಗ ಅತಿಕ್ರಮಣವಾಗಿದೆ. ರಸ್ತೆ ಬದಿಯಲ್ಲಿಯೇ ಇರುವ ಜಾಗವನ್ನು ರಾಜಾರೋಷವಾಗಿ ಯಾವುದೇ ಕಾನೂನಿನ ಭಯವಿಲ್ಲದೆ ಅತಿಕ್ರಮಣ ಮಾಡಿದ್ದಾರೆ. ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಸೂಕ್ತ ಕ್ರಮ ಜರುಗಿಸಬೇಕು.
ಸರ್ಕಾರಿ ಭೂಮಿ ಅತಿಕ್ರಮಣ ಮಾಡಿರುವುದು ಗಮನಕ್ಕೆ ಬರುತ್ತಿದ್ದಂತೆ ತಹಸೀಲ್ದಾರ್‌ಗೆ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ಮತ್ತೊಮ್ಮೆ ಸಂಬಂಧಪಟ್ಟವರಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಜರುಗಿಸಲಾಗುವುದು.