ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ನವೀನ್ ಮಾತನಾಡಿದರು. ಮಂಜುನಾಥ್, ಸಚಿನ್ ಕುಮಾರ್, ಯೂಸುಫ್ ಮೊದಲಾದವರಿದ್ದರು.
ಬಂಟ್ವಾಳ: ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ 2026 ಕಾರ್ಯಕ್ರಮದಡಿ ಮತದಾರರ ಪಟ್ಟಿ ನಿಖರ ಹಾಗೂ ನವೀಕರಣಗೊಳಿಸುವ ಕಾರ್ಯಕ್ಕೆ ಒತ್ತು ನೀಡಲಾಗಿದೆ ಎಂದು ಉಪ ತಹಸೀಲ್ದಾರ್ ನವೀನ್ ಹೇಳಿದರು.
ತಾಪಂ ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ಆಡಳಿತ ಮತ್ತು ತಾಲೂಕು ಸ್ವೀಪ್ ಸಮಿತಿ, ಬಿ.ಮೂಡ ಸರ್ಕಾರಿ ಪಪೂ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಷ್ಕರಣೆ ಸಂದರ್ಭ 18 ವರ್ಷ ಪೂರ್ಣಗೊಂಡ ಅರ್ಹ ನಾಗರಿಕರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು, ಮರಣ ಹೊಂದಿದವರು ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡವರ ಹೆಸರು ಪಟ್ಟಿಯಿಂದ ಕೈಬಿಡುವುದು, ಹೆಸರು, ವಿಳಾಸ, ವಯಸ್ಸು, ಲಿಂಗ ಮತ್ತು ಇತರೆ ವಿವರಗಳಲ್ಲಿನ ದೋಷ ತಿದ್ದುಪಡಿ ಮಾಡುವುದು ಸೇರಿದಂತೆ ಮತದಾರರ ಪಟ್ಟಿ ದೋಷರಹಿತವಾಗಿ ಸಿದ್ಧಪಡಿಸಲಾಗುತ್ತಿದೆ ಎಂದರು.
ತಹಸೀಲ್ದಾರ್ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಜಾಗೃತಿ ಜಾಥಾವು ಬಿ.ಮೂಡ ಸರ್ಕಾರಿ ಪಪೂ ಕಾಲೇಜಿನಿಂದ ಆರಂಭಗೊಂಡು ತಾಪಂ ಕಚೇರಿವರೆಗೆ ಸಂಚರಿಸಿ ಸಮಾಪನಗೊಂಡಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್, ಪ್ರಾಂಶುಪಾಲ ಯೂಸುಫ್, ತಾಪಂ ವ್ಯವಸ್ಥಾಪಕ ಪ್ರಕಾಶ್ ಪಿ., ತಾಲೂಕು ವಿಷಯ ನಿರ್ವಾಹಕ ಪ್ರಶಾಂತ್, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.