ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಕೆರೆಗಳಿದ್ದು, ಅವುಗಳ ಪುನರುಜ್ಜೀವನಕ್ಕೆ ಒತ್ತು ನೀಡಲಾಗುವುದು. ತಾಲೂಕು ಪತ್ರಕರ್ತರ ಸಂಘ ಸಹಯೋಗದೊಂದಿಗೆ ಶಾಸಕನಾಗಿ ಮಾದರಿಯಾಗಿ ಕೆರೆಯೊಂದನ್ನು ಅಭಿವೃದ್ಧಿಪಡಿಸಲು ಉತ್ಸುಕನಾಗಿದ್ದೇನೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದರು.
ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಲಸೌಕರ್ಯಕ್ಕೆ ಆದ್ಯತೆ
ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೋಸ್ಟಲ್ ಕಾರಿಡಾರ್ ರಚನೆ ಮತ್ತು ಮೂಲಸೌಕರ್ಯಗಳ ಜೋಡಣೆಗೆ ಒತ್ತು ನೀಡಲಾಗುವುದು. ಅನುದಾನದ ಅಲಭ್ಯತೆ ಇರುವುದರಿಂದ ಪಿಪಿಟಿ ಮಾದರಿಯ ಕ್ರಿಯಾಯೊಜನೆ ಸಿದ್ಧಪಡಿಸಲಾಗುವುದು.
ಮಂಗಳೂರಿನಿಂದ ಕುಂದಾಪುರ ನಡುವೆ ಮೆಟ್ರೋ ರೈಲು ಸಂಚಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಇಟ್ಟಿದ್ದೇವೆ. ಪರಿಶೀಲನಾ ಹಂತದಲ್ಲಿದೆ. ಕಾಪು ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಚನೆ, ಅಂತಾರಾಷ್ಟ್ರೀಯ ಕ್ರೀಡಾಂಗಣ ರಚನೆಗೆ ಒತ್ತು ನೀಡಲಾಗುವುದು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರಕ್ಕೂ ಮನವಿ ಮಾಡಲಾಗಿದೆ.
ಸಾಧಕತೆ ಬಗ್ಗೆ ತಜ್ಞರ ವರದಿ ತಯಾರಿ ನಡೆಯುತ್ತಿದೆ. ಪಡುಬಿದ್ರಿ ಪರಿಸರದಲ್ಲಿರುವ ಜಾಗವನ್ನು ಮೀಸಲಿಡಿಸುವಂತೆ ಜಿಲ್ಲಾಧಿಕಾರಿಯವರಿಗೂ ಮನವಿ ಮಾಡಿದ್ದೇವೆ. ಫಿಶಿಂಗ್ ವಲಯ ರಚನೆ ಮೂಲಕ ಕರಾವಳಿ ಅಭಿವೃದ್ಧಿಗೆ ಒತ್ತು ನೀಡಲು ಅವಕಾಶವಿದೆ. ಹೆಜಮಾಡಿಯಲ್ಲಿ ಸುಸಜ್ಜಿತ ಕ್ರೀಡಾಂಗಣ ರಚನೆ ಬಗ್ಗೆ ಆಲೋಚನೆಯಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್, ಕಾರ್ಯದರ್ಶಿ ಪುಂಡಲೀಕ ಮರಾಠೆ, ಕೋಶಾಧಿಕಾರಿ ಸಂತೋಷ್ ನಾಯ್ಕ ಉಪಸ್ಥಿತರಿದ್ದರು.
ಕೇವಲ 50 ಕೋಟಿ ರೂ. ಅನುದಾನ
ಶಾಸಕನಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಖುಷಿಯಿದೆ. ಆದರೆ ಈಗಿನ ವ್ಯವಸ್ಥೆಗಳ ಬಗ್ಗೆ ಸಮಾಧಾನವಿಲ್ಲ. ಹಿಂದಿನ ಶಾಸಕರು 2,500 ಕೋಟಿ ರೂ.ವರೆಗೆ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದರು. ನಾನು ಶಾಸಕನಾಗಿ ಮೂರು ವರ್ಷದಲ್ಲಿ ಕೇವಲ 50 ಕೋಟಿ ರೂ. ಅನುದಾನ ಸಿಕ್ಕಿರುವುದು. ದೊಡ್ಡ ಕ್ಷೇತ್ರದ ಅಭಿವೃದ್ಧಿಗೆ ಈ ಅನುದಾನ ಸಾಕೇ ಎಂದು ಗುರ್ಮೆ ಸುರೇಶ್ ಶೆಟ್ಟಿ ಪ್ರಶ್ನಿಸಿದರು.