ತಾರಾನಾಥ ಪೂಜಾರಿ ಇರುವೈಲ್ ಅವರಿಗೆ ಬ್ರಹ್ಮಶ್ರೀ ಪ್ರಶಸ್ತಿ ಪ್ರದಾನಿಸಲಾಯಿತು. ಬ್ರಹ್ಮಶ್ರೀ ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ, ಶಾಸಕ ಉಮಾನಾಥ ಕೋಟ್ಯಾನ್, ರವಿಶಂಕರ್ ಮಿಜಾರ್, ಎ.ಜೆ.ಶೇಖರ್ ಇನ್ನಿತರರು ಉಪಸ್ಥಿತರಿದ್ದರು.  
ಉಡುಪಿ

ಶಿಕ್ಷಣ ಕ್ಷೇತ್ರದ ಅಸಮಾನತೆ ನಿವಾರಣೆ

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ದೇಶ ಕಟ್ಟಲು ಶಿಕ್ಷಣದಿಂದ ಮಾತ್ರ ಸಾಧ್ಯ, ಆದರೆ ಶಿಕ್ಷಣ ಕ್ಷೇತ್ರದಲ್ಲಿರುವ ಬಡವ ಮತ್ತು ಶ್ರೀಮಂತ ಎನ್ನುವ ಅಸಮಾನತೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ವಿಫಲವಾಗಿರುವುದರಿಂದ ಸಂಘ-ಸಂಸ್ಥೆಗಳು ಆ ಕಾರ್ಯ ಮಾಡಬೇಕು ಎಂದು ಕರ್ನಾಟಕ ಸರ್ಕಾರದ ಅಡಿಷನಲ್ ಅಡ್ವಕೇಟ್ ಜನರಲ್ ತಾರಾನಾಥ ಪೂಜಾರಿ ಇರುವೈಲ್ ಅಭಿಪ್ರಾಯಪಟ್ಟರು.
ಉಳ್ಳಾಲದ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮತ್ತು ಬ್ರಹ್ಮಶ್ರೀ ಮಹಿಳಾ ವೇದಿಕೆ ವತಿಯಿಂದ ಭಾನುವಾರ ತೊಕ್ಕೊಟ್ಟು ಸಮೀಪದ ಕಾಪಿಕಾಡ್‌ನಲ್ಲಿ 25ನೇ ವರ್ಷದ ಬ್ರಹ್ಮಶ್ರೀ ಪ್ರಶಸ್ತಿ ಪ್ರದಾನ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಶೈಕ್ಷಣಿಕ ದತ್ತು ಸ್ವೀಕಾರ ಉದ್ಘಾಟಿಸಿದರು. ತಾರಾನಾಥ ಪೂಜಾರಿಗೆ ಬ್ರಹ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬ್ರಹ್ಮಶ್ರೀ ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮುಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್, ಕಾಪಿಕಾಡ್ ಶ್ರೀ ಉಮಾಮಹೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಎ.ಜೆ.ಶೇಖರ್, ಮೊಕ್ತೇಸರ ದಿನೇಶ್ ಅತ್ತಾವರ, ಬ್ರಹ್ಮಶ್ರೀ ಮಹಿಳಾ ವೇದಿಕೆ ಅಧ್ಯಕ್ಷೆ ಗಂಗಾ ಆನಂದ್, ಕುದ್ರೋಳಿ ಶ್ರೀ ಗೋಕರ್ಣಾಥ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮೊಕ್ತೇಸರ ಚಂದ್ರಶೇಖರ್ ಉಚ್ಚಿಲ್, ವೇದಿಕೆಯ ಗೌರವ ಸಲಹೆಗಾರ ಮಾಧವ ಪೂಜಾರಿ ದುಬೈ ಮೊದಲಾದವರು ಉಪಸ್ಥಿತರಿದ್ದರು.
ಆನಂದ ಕೆ.ಅಸೈಗೋಳಿ ಸ್ವಾಗತಿಸಿದರು. ಜೀವನ್ ಕುಮಾರ್ ತೊಕ್ಕೊಟ್ಟು ಶೈಕ್ಷಣಿಕ ದತ್ತು ಸ್ವೀಕಾರ ವಿದ್ಯಾರ್ಥಿಗಳ ಹೆಸರು, ಸತೀಶ್ ಕರ್ಕೇರ ಪ್ರಶಸ್ತಿ ಪತ್ರ ಮತ್ತು ಹರೀಶ್ ಮುಂಡೋಳಿ ಸಾಧಕ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಲಕ್ಷ್ಮಣ ಪೂಜಾರಿ ವಂದಿಸಿದರು. ಸುರೇಖಾ ಪೂಜಾರಿ ಹಾಗೂ ಶಿಫಾಲಿ ತೊಕ್ಕೊಟ್ಟು ನಿರೂಪಿಸಿದರು.