ಕಾರ್ಮಿಕರ ಕೊರತೆಯಿಂದ ಬೆದ್ರಂಪಳ್ಳದ ಮರದ ಕಾರ್ಖಾನೆಯೊಂದು ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಬೇಕಾಗಿಬಂದಿದೆ.
ಪುರುಷೋತ್ತಮ ಪೆರ್ಲ ಕಾಸರಗೋಡು
ಮತದಾರರ ಪಟ್ಟಿ ಪರಿಷ್ಕರಿಸಿದ(ಎಸ್‌ಐಆರ್) ನಂತರ ನಡೆದ ಸಾರ್ವತ್ರಿಕ ಚುನಾವಣೆ ಬಹುತೇಕ ಮತದಾರರನ್ನು ಮತಗಟ್ಟೆಗೆ ತಲುಪುವಂತೆ ಮಾಡಿದೆ. ಮತದಾನ ಎಂದರೆ ಮೂಗು ಮುರಿಯುತ್ತಿದ್ದವರೂ ಈ ಬಾರಿ ದೂರದೂರಿಂದಲೂ ಆಗಮಿಸಿ ಮತದಾನದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.
ದೂರದ ಮುಂಬೈ, ಬೆಂಗಳೂರು, ಕೊಚ್ಚಿ, ತಿರುವನಂತಪುರ ಸೇರಿದಂತೆ ಉದ್ಯೋಗಕ್ಕಾಗಿ ತೆರಳಿದ್ದವರಲ್ಲಿ ಬಹುತೇಕ ಮಂದಿ ಊರಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಇನ್ನು ಯುದ್ಧಾತಂಕದ ಹಿನ್ನೆಲೆಯಲ್ಲಿ ವಿದೇಶದಲ್ಲಿರುವವರಲ್ಲಿ ಬೆರಳೆಣಿಕೆ ಮಂದಿಗೆ ಮಾತ್ರ ಮತದಾನದಲ್ಲಿ ಭಾಗವಹಿಸಲು ಸಾಧ್ಯವಾಗಿದೆ. ಮತದಾನದಲ್ಲಿ ಪಾಲ್ಗೊಳ್ಳದಿದ್ದಲ್ಲಿ ಪೌರತ್ವಕ್ಕೂ ಧಕ್ಕೆಯುಂಟಾಗಲಿದೆ ಎಂಬ ಪ್ರಚಾರವೂ ಬಹುತೇಕ ಮಂದಿಯನ್ನು ಮತದಾನಕ್ಕೆ ಪ್ರೇರೇಪಿಸಿತ್ತು.
ಕಾರ್ಮಿಕರ ಕೊರತೆ
ಜಿಲ್ಲೆಯಲ್ಲಿ ನೂರಾರು ಹೊರ ರಾಜ್ಯದ ಕಾರ್ಮಿಕರಿದ್ದು, ಇವರಲ್ಲಿ ಬಹುತೇಕ ಮಂದಿ ಬಂಗಾಳಿಗಳಾಗಿದ್ದಾರೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಂಪುಕಲ್ಲಿನ ಕ್ವಾರಿ, ಮರದ ಕಾರ್ಖಾನೆ, ತೇಪಿನ ಕೆಲಸದಲ್ಲಿ ನಿರತರಾಗಿರುವವರು ಬಂಗಾಳಿ, ಅಸ್ಸಾಂ ಸೇರಿದಂತೆ ಉತ್ತರದ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಈ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಮಂದಿ ಕಾರ್ಮಿಕರು ಊರಿಗೆ ತೆರಳಿರುವುದರಿಂದ ಈ ವಲಯಗಳಲ್ಲಿನ ಕೆಲಸ ಕಾರ್ಮಿಕರ ಕೊರತೆಯಿಂದ ಸ್ಥಗಿತಗೊಳ್ಳುವಂತಾಗಿದೆ. ಬಹುತೇಕ ಕೆಂಪುಕಲ್ಲು ಕ್ವಾರಿ, ಮರದ ಕಾರ್ಖಾನೆಗಳು ಕೆಲಸ ಸ್ಥಗಿತಗೊಳಿಸಿವೆ.
ಕಠಿಣ ಕೆಲಸಗಳಲ್ಲಿ ದಿನಪೂರ್ತಿ ತೊಡಗಿಸಿಕೊಂಡು, ಬಿಡುವಿಲ್ಲದೆ ಕೆಲಸ ನಡೆಸುತ್ತಿರುವುದರಿಂದ ಈ ಪ್ರದೇಶದ ಕೆಂಪುಕಲ್ಲು ಕ್ವಾರಿ, ಕಾರ್ಖಾನೆಗಳಲ್ಲಿ ಉತ್ತರ ರಾಜ್ಯದ ಕಾರ್ಮಿಕರನ್ನೇ ತೊಡಗಿಸಿಕೊಳ್ಳಲಾಗುತ್ತಿದೆ. ಇದರಿಂದ ಊರಿನ ಕೂಲಿ ಕಾರ್ಮಿಕರು ಕೆಲಸದ ಕೊರತೆ ಅನುಭವಿಸುತ್ತಿರುವುದಾಗಿಯೂ ದೂರು ಕೇಳಿಬರುತ್ತಿದೆ. ಆದರೆ ಊರಿನ ಕಾರ್ಮಿಕರು ಇಂತಹ ಕಠಿಣ ಕೆಲಸದಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದಾಗಿ ಕ್ವಾರಿ ಮಾಲೀಕರು ತಿಳಿಸುತ್ತಾರೆ.
ಈ ಹಿಂದೆ ಚುನಾವಣೆಗಳ ಸಮಯ ಹೊರ ರಾಜ್ಯ ಕಾರ್ಮಿಕರು ಮತದಾನಕ್ಕೆ ತೆರಳುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಊರಿಗೆ ತೆರಳಲು ಹೆಚ್ಚಿನ ಖರ್ಚು ಹಾಗೂ ದಿನ ತಗಲುವುದರಿಂದ ಮತದಾನ ಪಕ್ರಿಯೆಯಿಂದ ದೂರ ಉಳಿಯುತ್ತಿದ್ದರು. ಆದರೆ ಈ ಬಾರಿ ಎಸ್‌ಐಆರ್ ಹಿನ್ನೆಲೆಯಲ್ಲಿ ಮತದಾನದಿಂದ ಬಿಟ್ಟು ನಿಂತಲ್ಲಿ ತಮ್ಮ ಪೌರತ್ವಕ್ಕೆ ಧಕ್ಕೆಯುಂಟಾಗಬಹುದೆಂಬ ಭೀತಿಯಿಂದ ಎಲ್ಲ ಕಾರ್ಮಿಕರೂ ಮತದಾನಕ್ಕಾಗಿ ಊರಿಗೆ ತೆರಳಿದ್ದಾರೆ.
ಈ ಹಿಂದೆ ಮತದಾನಕ್ಕಾಗಿ ಊರಿಗೆ ತೆರಳುವುದಕ್ಕೆ ಹಿಂದೇಟು ಹಾಕುತ್ತಿದ್ದ ಕಾರ್ಮಿಕರು ಈ ಬಾರಿ ಎಸ್‌ಐಆರ್ ಜಾರಿಗೆ ಬಂದಿರುವುದರಿಂದ ತಮ್ಮ ಪೌರತ್ವಕ್ಕೆ ಧಕ್ಕೆಯಾಗಬಹುದೆಂಬ ಭೀತಿಯಿಂದ ಮತದಾನಕ್ಕಾಗಿ ಊರಿಗೆ ತೆರಳಿದ್ದಾರೆ. ಸಾಮೂಹಿಕವಾಗಿ ಕಾರ್ಮಿಕರು ಊರಿಗೆ ತೆರಳಿರುವುದರಿಂದ ಕ್ವಾರಿಗಳ ಕೆಲಸ ಸ್ಥಗಿತಗೊಳಿಸಬೇಕಾಗುತ್ತಿದೆ. ಕೆಲವೆಡೆ ಊರಿನ ಕಾರ್ಮಿಕರನ್ನು ಬಳಸಿ ಕ್ವಾರಿ ಕಾರ್ಯನಿರ್ವಹಿಸುತ್ತಿವೆ.