* ಬ್ಯಾಂಕ್ ಖಾತೆ ಪರಿಶೀಲನೆ ನೆಪದಲ್ಲಿ ಮೋಸ
ಉಡುಪಿ: ನಾವು ಮುಂಬಯಿ ಪೊಲೀಸ್ ಡಿಪಾರ್ಟ್ಮೆಂಟ್ನವರಾಗಿದ್ದು ತಮ್ಮ ಖಾತೆಗೆ ಅಕ್ರಮವಾಗಿ ಕೋಟ್ಯಂತರ ರೂ. ಜಮಾ ಆಗಿದ್ದು, ನಿಮ್ಮನ್ನು ಬಂಧಿಸಲು ವಾರಂಟ್ ಜಾರಿಯಾಗಿದೆ ಎಂದು ವೃದ್ಧೇಯೋರ್ವರಿಗೆ ಬೆದರಿಸಿ 65 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ. ಉಡುಪಿಯ ಶೀಲಾ (66) ವಂಚಕರ ಮೋಸದಿಂದ ಹಣ ಕಳೆದುಕೊಂಡವರು.
ಜು.13ರಂದು ಬೆಳಗ್ಗೆ 10 ಗಂಟೆಗೆ ಅವರ ಮೊಬೈಲ್ನ ವಾಟ್ಸಪ್ಗೆ ಮುಂಬಯಿ ಪೊಲೀಸ್ ಡಿಪಾರ್ಟ್ಮೆಂಟ್ ಎಂಬ ಮೆಸೇಜ್ ಬಂದಿದೆ. ನಂತರ ಅದೇ ನಂಬರ್ನಿಂದ ವಿಡಿಯೋ ಕಾಲ್ ಬಂದಿದ್ದು, ಪೊಲೀಸ್ ಯೂನಿಫಾಮ್ರ್ನಲ್ಲಿದ್ದ ವ್ಯಕ್ತಿಯೋರ್ವ, ನಾನು ಮುಂಬಯಿ ಕೊಲಬಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂದು ತಿಳಿಸಿದ್ದಾನೆ.
ನಿಮ್ಮ ಮನೆಯಲ್ಲಿ ಯಾರೆಲ್ಲ ಇದ್ದಾರೆ ಎಂದು ಕೇಳಿದ್ದು, ಮಹಿಳೆ ತಾನು ಒಬ್ಬಳೇ ಇರುವುದಾಗಿ ತಿಳಿಸಿದ್ದಾರೆ. ನೀವು ಹೆದರುವುದು ಬೇಡ, ನಿಮಗೊಂದು ವಿಚಾರ ಹೇಳುತ್ತೇನೆ. ನಿಮ್ಮ ಕೆನರಾ ಬ್ಯಾಂಕ್ ಖಾತೆಗೆ 20 ಕೋಟಿ ರೂ. ಜಮಾ ಆಗಿದೆ. ಈ ಹಣದ ಬಗ್ಗೆ ನಿಮ್ಮ ವಿರುದ್ಧ ಕೇಸ್ ಆಗಿದ್ದು, ನಿಮ್ಮನ್ನು ಬಂಧಿಸಲು ವಾರಂಟ್ ಜಾರಿಯಾಗಿದೆ. ಮಂಗಳೂರು ಪೊಲೀಸರು ನಿಮ್ಮನ್ನು ಬಂಧಿಸಲಿದ್ದಾರ ಎಂದು ಬೆದರಿಸಿದ್ದಾನೆ. ಬಳಿಕ ಬ್ಯಾಂಕ್ನ ಅಕೌಂಟ್ ಎಲ್ಲೆಲ್ಲಿದೆ ಎಂದು ವಿಚಾರಿಸಿ, ಬಲವಂತದಿಂದ ಹಾಗೂ ಹೆದರಿಸಿ ಖಾತೆಯ ವಿವರಗಳ ಫೋಟೋ ತೆಗೆಸಿಕೊಂಡಿದ್ದಾರೆ.
ನಿಮ್ಮ ವಿರುದ್ಧ ದಾಖಲಾಗಿರುವ ಕೇಸ್ನಿಂದ ಹೊರಗೆ ಬರಬೇಕೆಂದರೆ ನಿಮ್ಮ ಖಾತೆಯಲ್ಲಿರುವ ನೋಟುಗಳ ಸೀರಿಯಲ್ ನಂಬರ್ ಚೆಕ್ ಮಾಡಬೇಕಾಗಿದೆ. ನಾವು ಹೇಳಿದ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಬಂಧನ ಆಗಲಿದೆ ಎಂದು ಬೆದರಿಸಿದ್ದಾರೆ. ಬಳಿಕ ಜು.13ರಿಂದ ಜು.17ರ ವರೆಗೆ ಪದೇಪದೆ ವಾಟ್ಸಪ್ ಕರೆ ಮಾಡಿದ್ದಾರೆ.
ಖಾತೆಯ ವೆರಿಫಿಕೇಷನ್ ಮಾಡಲೇಬೇಕು ಎಂದು ಹೆದರಿಸಿದ್ದರಿಂದ ನಿಜವೆಂದು ನಂಬಿ ನನ್ನ ಖಾತೆಯಲ್ಲಿದ್ದ ಒಟ್ಟು 65 ಲಕ್ಷ ರೂ.ವನ್ನು ವಂಚಕರು ಹೇಳಿದ ಖಾತೆಗೆ ವರ್ಗಾವಣೆ ಮಾಡಿದ್ದೇನೆ. ನನಗೆ ಪೊಲೀಸರೆಂದು ಸುಳ್ಳು ಹೇಳಿ, ಬಂಧಿಸುತ್ತೇವೆ ಎಂದು ಬೆದರಿಸಿ ಮತ್ತು ಬ್ಯಾಂಕ್ ಖಾತೆಯ ಪರಿಶೀಲನೆ ಮಾಡುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದು, ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.