ಉಡುಪಿಯ ಇಂದ್ರಾಳಿಯಲ್ಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ಪಂಜು ಬೆಳಕಿನಲ್ಲಿ 'ಚಕ್ರವ್ಯೂಹ ಯಕ್ಷಗಾನ ಪ್ರದರ್ಶಿಸಿದರು.
* ಇಂದ್ರಾಳಿಯಲ್ಲಿ ಕೇಂದ್ರದ ವಿದ್ಯಾರ್ಥಿಗಳಿಂದ ಅಭಿನಯ
ಉಡುಪಿ: ಮಾಹೆಯ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾದ ಯಕ್ಷಗಾನ ಕೇಂದ್ರ ಇಂದ್ರಾಳಿಯಲ್ಲಿ ಮಾಸಿಕ ಕಾರ್ಯಕ್ರಮದ ನಿಮಿತ್ತ ಕೇಂದ್ರದ ವಿದ್ಯಾರ್ಥಿಗಳು ದೊಂದಿ (ಪಂಜು) ಬೆಳಕಿನಲ್ಲಿ 'ಚಕ್ರವ್ಯೂಹ' ಎಂಬ ಯಕ್ಷಗಾನ ಪ್ರಸಂಗವನ್ನು ಉತ್ತಮವಾಗಿ ಪ್ರದರ್ಶಿಸಿದರು.
ಕೇಂದ್ರದ ಗುರುಗಳ ಮುತುವರ್ಜಿಯಲ್ಲಿ ಮಕ್ಕಳು ಅದ್ಭುತವಾಗಿ ಅಭಿನಯಿಸಿದರು. ಭಾಗವತರ ರಾಗಭರಿತ ಗಾಯನ, ಚಂಡೆ&ಮದ್ದಲೆಗಳ ಸದ್ದಿನೊಂದಿಗೆ ಪಾತ್ರಧಾರಿ ವಿದ್ಯಾರ್ಥಿಗಳು ಕುಣಿದು ರಂಜಿಸಿದರು. ಅದ್ಭುತ ವೇಷಭೂಷಣ, ಮುಖವರ್ಣಿಕೆ ಮತ್ತು ಸಂಭಾಷಣೆ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಗೋಪಾಡಿ ಉಮೇಶ್ ಸುವರ್ಣ, ಚಂಡೆಯಲ್ಲಿ ಕೃಷ್ಣಮೂರ್ತಿ ಭಟ್ ಬಗ್ವಾಡಿ, ಮದ್ದಳೆಯಲ್ಲಿ ಬಸವ ಮರಕಾಲ ಮುಂಡಾಡಿ ಸಹಕರಿಸಿದರು. ಪ್ರಶಸ್ತಿ ಪುರಸತ ಶಿಕ್ಷಕ ಸುರೇಶ್ ಮರಕಾಲ ಮುಂಡಾಡಿ ಅವರು ದೊಂದಿ ಬೆಳಕು ಸಂಯೋಜಿಸಿದರು.
ಇಂದ್ರಾಳಿ ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ಭುವನ ಪ್ರಸಾದ್ ಹೆಗ್ಡೆ, ಮಂಜುನಾಥ ಮಯ್ಯ, ವಿ.ಜಿ. ಶೆಟ್ಟಿ ಇತರರು ಉಪಸ್ಥಿತರಿದ್ದರು.
ದೊಂದಿ (ಪಂಜು) ಬೆಳಕಿನ ಯಕ್ಷಗಾನವು ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕಲೆ. ಇದು ಆಧುನಿಕ ವಿದ್ಯುತ್ ದೀಪಗಳಿಲ್ಲದೆ ಕೇವಲ ಪಂಜಿನ ಬೆಳಕಿನಲ್ಲಿ ನಡೆಯುವ ಅಪರೂಪದ ಪ್ರದರ್ಶನ. ಇಂದ್ರಾಳಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ವಿವಿಧ ಪಾತ್ರಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದರು.