ಉಡುಪಿ ಮಣಿಪಾಲದ ಡಿಆರ್​ಎನ್​ಕೆ ಲ್ಯಾಬ್​ ಕೆಫೆಯಲ್ಲಿ ಅಕ್ರಮವಾಗಿ ಹುಕ್ಕಾ ಸೇದುತ್ತಿದ್ದ ಯುವಕರು ಹಾಗೂ ಕೆಪೇಯ ಮ್ಯಾನೇಜರ್​ನನ್ನು ಪೊಲೀಸರು ವಶಕ್ಕೆ ಪಡೆದರು. 
ಉಡುಪಿ

ಹುಕ್ಕಾ ಅಕ್ರಮ ಸೇವನೆ, 9 ಯುವಕರ ಬಂಧನ

* ಮಣಿಪಾಲ ಠಾಣೆ ಪೊಲೀಸರ ದಾಳಿ

ಉಡುಪಿ: ಖಚಿತ ಮಾಹಿತಿಯ ಮೇರೆಗೆ ಕೆೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, ಅಕ್ರಮವಾಗಿ ಹುಕ್ಕಾ ಸೇದುತ್ತಿದ್ದ 8 ಯುವಕರು ಹಾಗೂ ಹುಕ್ಕಾ ಸೇದಲು ಅವಕಾಶ ಮಾಡಿಕೊಟ್ಟ ಕೆಫೆಯ ಮ್ಯಾನೇಜರ್​ ಸೇರಿ 9 ಮಂದಿಯನ್ನು ಬಂಧಿಸಿದ್ದಾರೆ.
ಕುಂದಾಪುರದ ಎಸ್​. ರಿಯಾಜ್​, ಬೈಂದೂರಿನ ಜೀಶಾನ್​ ಅಬ್ದುಲ್​ ಜಾಹೀರ್​, ಗಂಗೊಳ್ಳಿಯ ಮೊಹಮ್ಮದ್​ ಸಮೀರ್​, ಉಡುಪಿಯವರಾದ ಮಹಮ್ಮದ್​ ಸವಾದ್​, ಕೃಷ್ಣ, ಚಿರಾಗ್​, ಅನ್ವಿತ್​, ಕಾಪುವಿನ ತಾರಾನಾಥ್​, ಕೆಫೆಯ ಮ್ಯಾನೇಜರ್​ ದಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ಮಣ್ಣೂರು ಗ್ರಾಮದ ಮೊಹಮ್ಮದ್​ ಶಫಾನ್​ ಬಂಧಿತರು. ಆರೋಪಿಗಳೆಲ್ಲರೂ 20ರಿಂದ 22 ವರ್ಷದವರಾಗಿದ್ದಾರೆ. 

ಮಣಿಪಾಲದ ವಿದ್ಯಾರತ್ನ ನಗರದ ಡಿಸಿ ಕಚೇರಿ ರಸ್ತೆ ಮಾರ್ಗದಲ್ಲಿರುವ ಐರಿಸ್​ ಕಟ್ಟಡದ 1ನೇ ಮಹಡಿಯಲ್ಲಿರುವ ಡಿಆರ್​ಎನ್​ಕೆ ಲ್ಯಾಬ್​ ಹೆಸರಿನ ಕೆಫೆಯಲ್ಲಿ ಅಕ್ರಮವಾಗಿ ಹುಕ್ಕಾ ಸೇದುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆ.6ರಂದು ರಾತ್ರಿ ಪಿಎಸ್​ಐ ವಾಮನ್​ ಹಾಗೂ ಹೆಡ್​ ಕಾನ್​ಸ್ಟೇಬಲ್​ಗಳಾದ ಸುರೇಶ್​ ಶೆಟ್ಟಿ, ಚೇತನ್​ ಕುಮಾರ್​, ಸಿಬ್ಬಂದಿ ರವಿರಾಜ್​, ಉಮೇಶ್​ ದಾಳಿ ನಡೆಸಿದ್ದರು. ಕೆಫೆಯೊಳಗೆ ಪರಿಶೀಲಿಸಿದಾಗ 8 ಹುಡುಗರು ಕುರ್ಚಿಯಲ್ಲಿ ಕುಳಿತು ಟೇಬಲ್​ನ ಮೇಲೆ ಹುಕ್ಕಾ ಶೀಸೆಗಳನ್ನು ಇಟ್ಟುಕೊಂಡು ಹುಕ್ಕಾ ಸೇವಿಸುತ್ತಿದ್ದರು. 

ಎಲ್ಲ ಯುವಕರನ್ನು ವಶಕ್ಕೆ ಪಡೆದ ಪೊಲೀಸರು, ಸಣ್ಣ ವಯಸ್ಸಿನ ಹುಡುಗರಿಗೆ ಹುಕ್ಕಾ ನೀಡುತ್ತಿದ್ದ ಕೆಫೆಯ ಮ್ಯಾನೇಜರ್​ನನ್ನು ಬಂಧಿಸಿದರು. ಮಣಿಪಾಲ ಠಾಣೆಯಲ್ಲಿ ಕೊಟ್ಪಾ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.