ಉಡುಪಿಯ ಮಲ್ಪೆಯಲ್ಲಿ ನಡೆದ ಈದ್ ಸೌಹಾರ್ದ ಕೂಟದಲ್ಲಿ ಫಾ. ಡೆನಿಸ್ ಡೆಸಾ ಮಾತನಾಡಿದರು. ಪ್ರೊ. ಜಮಾಲುದ್ದೀನ್ ಹಿಂದಿ, ರಮೇಶ್ ತಿಂಗಳಾಯ, ವಿನಯ್ ಸಂದೇಶ್, ಅಬ್ದುಲ್ ಅಝೀಜ್, ಅಬ್ದುಲ್ ರೆಹಮಾನ್ ಇದ್ದರು.
* ತೊಟ್ಟಂ ಚರ್ಚ್ನ ಫಾದರ್ ಡೆನಿಸ್ ಡೆಸಾ ಅನಿಸಿಕೆ
* ಮಲ್ಪೆಯಲ್ಲಿ ಈದ್ ಸೌಹಾರ್ದ ಕೂಟ
ಉಡುಪಿ: ರಂಜಾನ್ ಹಬ್ಬದ ಸಂದರ್ಭದಲ್ಲಿ ಕೈಗೊಳ್ಳುವ ಪ್ರಾರ್ಥನೆ, ಉಪವಾಸ, ದಾನ&ಧರ್ಮ ಕಾರ್ಯಗಳಿಂದ ಇನ್ನಿತರ ಧರ್ಮಗಳಲ್ಲಿರುವ ಸಾಮ್ಯತೆ ಕಾಣುತ್ತೇವೆ. ಉಪವಾಸ, ಪ್ರಾರ್ಥನೆಯಿಂದ ದೇಹ, ಮಾನಸಿಕ ಶುದ್ಧಿಯಾಗುತ್ತದೆ. ಆಧ್ಯಾತ್ಮಿಕ ಭಾವದೊಂದಿಗೆ ನಕಾರಾತ್ಮಕ ಚಿಂತನೆ ದೂರವಾಗಿ ಸಕಾರತ್ಮಕ ಆಲೋಚನೆ ಮೂಡುತ್ತದೆ. ಹಬ್ಬಗಳು ಮಾನವರನ್ನು ಒಗ್ಗೂಡಿಸುವ ಮಾಧ್ಯಮವಾಗಿದ್ದು ಒಟ್ಟಾಗಿ ಆಚರಿಸಿದಾಗ ಸೌಹಾರ್ದತೆ ಸಾರುತ್ತವೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚ್ನ ಧರ್ಮಗುರು ವಂ.ಡೆನಿಸ್ ಡೆಸಾ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಮಲ್ಪೆಯಲ್ಲಿ ಜಮಾತೆ ಇಸ್ಲಾಮಿ ಹಿಂದ್ ಮಲ್ಪೆ ಶಾಖೆಯ ವತಿಯಿಂದ ಮಂಗಳವಾರ (ಮಾ.25) ರಾತ್ರಿ ಆಯೋಜಿಸಿದ್ದ ಈದ್ ಸೌಹಾರ್ದ ಕೂಟದಲ್ಲಿ ಮಾತನಾಡಿದರು.
ಮಣಿಪಾಲ ಎಂಐಟಿ ಅಸೋಸಿಯೇಟ್ ಪ್ರೊಫೆಸರ್ ಜಮಾಲುದ್ದೀನ್ ಹಿಂದಿ ಈದ್ ಸಂದೇಶ ನೀಡಿದರು. ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿಯ ಅಧ್ಯಕ್ಷ ರಮೇಶ್ ತಿಂಗಳಾಯ, ಮಲ್ಪೆ ಸಿಎಸ್ಐ ಚರ್ಚ್ನ ಧರ್ಮಗುರು ವಂ.ವಿನಯ್ ಸಂದೇಶ್ ಮಾತನಾಡಿದರು.
ಜಮಾತೆ ಇಸ್ಲಾಮಿ ಹಿಂದ್ ಸಂಚಾಲಕ ಅಬ್ದುಲ್ ಅಝೀಜ್, ಸ್ಥಾನೀಯ ಸಂಚಾಲಕ ಅಬ್ದುಲ್ ರೆಹಮಾನ್ ಇತರರು ಉಪಸ್ಥಿತರಿದ್ದರು. ಸಫ್ವಾನ್ ಪ್ರಾರ್ಥಿಸಿದರು. ಶಬೀರ್ ಮಲ್ಪೆ ವಂದಿಸಿದರು. ಶೊಯೆಬ್ ಅಹ್ಮದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಈದ್ ಸಾರ್ವತ್ರಿಕ ಹಬ್ಬವಾಗಿದೆ. ಮಾನವ ಮತ್ತು ಸೃಷ್ಟಿಕರ್ತ ಹಾಗೂ ಸೃಷ್ಟಿಗಳೊಂದಿಗೆ ಇರುವ ಸಂಬಂಧ ಗಟ್ಟಿಗೊಳಿಸುವ ಸಮಯವಾಗಿದೆ. ರಂಜಾನ್ ಹಬ್ಬದ ಸಂದರ್ಭದಲ್ಲಿ ನಮ್ಮ ನೆರೆಹೊರೆಯವರು ಯಾರೂ ಕೂಡ ಹಸಿವಿನಿಂದ ಇರಬಾರದು ಎಂಬ ಸ್ಪಷ್ಟ ಸಂದೇಶವಿದೆ. ಇತರರೊಂದಿಗೆ ನಮ್ಮ ಆಚರಣೆ ಕೈಗೊಂಡಾಗ ಸಮಾಜದಲ್ಲಿ ಸೌಹಾರ್ದತೆ ಮೂಡಲಿದೆ.