ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸುಳ್ಯ ಮೆಸ್ಕಾಂ ಎಇಇ ಹರೀಶ್ ನಾಯ್ಕ, ಸುಬ್ರಹ್ಮಣ್ಯ ಮೆಸ್ಕಾಂ ಎಇಇ ಸತೀಶ್ ಸಫಲ್ಯ ಮೊದಲಾದವರಿದ್ದರು.
ಸುಳ್ಯ: ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತಪಟ್ಟ ಫಲಾನುಭವಿಗಳ 87 ಮನೆಯವರು ಹಣ ಡ್ರಾ ಮಾಡಿರುವುದು ಕಂಡುಬಂದಿದ್ದು ಈ ಕುರಿತು ಬ್ಯಾಂಕ್‌ನವರ ಮೂಲಕ ಮನೆಯವರ ಮನವೊಲಿಸಿ ಹಣ ಮರುಪಾವತಿಗೆ ಪ್ರಯತ್ನ ನಡೆಸಲಾಗುವುದು. ಈ ಕುರಿತು ಬ್ಯಾಂಕ್‌ನಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಎಲ್ಲ ಮನೆಯವರಿಗೂ ಹಣ ವಾಪಸಾತಿಯ ಕುರಿತು ಮಾಹಿತಿ ನೀಡಲಾಗಿದೆ ಎಂದು ಎಂದು ಸಿಡಿಪಿಒ ಶೈಲಜಾ ಹೇಳಿದರು.
ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆಯಲ್ಲಿ ನಡೆದ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಗೃಹಜ್ಯೋತಿ ಪರಿಶೀಲನೆ ನಡೆಯುತ್ತಿದ್ದು ಈಗಾಗಲೇ ಶೇ.88 ಪ್ರಗತಿ ಸಾಧಿಸಲಾಗಿದೆ ಎಂದು ಮೆಸ್ಕಾಂ ಇಂಜಿನಿಯರ್‌ಗಳು ತಿಳಿಸಿದರು. ಆ.31 ಕೊನೆಯ ದಿನವಾಗಿರುವುದರಿಂದ ಗುರಿ ತಲುಪಲು ಅಧಿಕಾರಿಗಳು ಪ್ರಯತ್ನ ನಡೆಸಬೇಕು ಎಂದು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಸೂಚಿಸಿದರು.
ಸುಳ್ಯ ಮೆಸ್ಕಾಂ ಎಇಇ ಹರೀಶ್ ನಾಯ್ಕ, ಸುಬ್ರಹ್ಮಣ್ಯ ಮೆಸ್ಕಾಂ ಎಇಇ ಸತೀಶ್ ಸಫಲ್ಯ ಮಾಹಿತಿ ನೀಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಭವಾನಿಶಂಕರ ಕಲ್ಮಡ್ಕ, ಶೇಖರ ಕಣೆಮರಡ್ಕ, ಈಶ್ವರ ಆಳ್ವ, ಶಿಲ್ಪಾ ಇಬ್ರಾಹಿಂ ಮಾತನಾಡಿದರು.
ತಾಪಂ ಇಒ ರಾಜಣ್ಣ, ಸದಸ್ಯರಾದ ರವಿ ಗುಂಡ್ಯಡ್ಕ, ಭವಾನಿ ಬೊಮ್ಮೆಟ್ಟಿ, ರಾಜು ನೆಲ್ಲಿಕುಮೇರಿ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಅನ್ನಭಾಗ್ಯ ಅಕ್ಕಿ ಮಾರಾಟ ದೂರು
ಪಡಿತರ ಪಡೆಯುವ ಗ್ರಾಹಕರ ಇ-ಕೆವೈಸಿ ಪಡೆಯುವ ಕಾರ್ಯ ಸೆ.1ರಿಂದ ನಡೆಯಲಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಅನ್ನಭಾಗ್ಯದ ಅಕ್ಕಿಯನ್ನು ಅಂಗಡಿಗಳಲ್ಲಿ ಮಾರಾಟ ಮಾಡುವ ಕುರಿತು ದೂರುಗಳು ಬಂದಿವೆ. ಈ ಕುರಿತು ಪರಿಶೀಲನೆ ನಡೆಸಬೇಕು ಎಂದು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ತಿಳಿಸಿದರು. ಕೊಡಿಯಾಲ, ಮಂಡೆಕೋಲು, ಅಜ್ಜಾವರ ಭಾಗಕ್ಕೆ ಬಸ್ ಸೌಲಭ್ಯ ಕಲ್ಪಿಸುವ ಕುರಿತು ಶೇಖರ್ ಕಣೆಮರಡ್ಕ, ಈಶ್ವರ ಆಳ್ವ, ಅಬ್ಬಾಸ್ ಪ್ರಸ್ತಾಪಿಸಿದರು.