ನಮಸ್ತೆ ಕಲೆಕ್ಟರ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರೊಂದಿಗೆ ಕುಂಜತ್ತೂರು ಜಿವಿಎಚ್‌ಎಸ್‌ಎಸ್‌ನ ಮಕ್ಕಳು. 
ಉಡುಪಿ

ಕಾಸರಗೋಡು ಜಿಲ್ಲೆ ಅಭಿವೃದ್ಧಿಗೆ ಪ್ರಯತ್ನ

ಮಂಜೇಶ್ವರ: ಕುಂಜತ್ತೂರು ಜಿವಿಎಚ್‌ಎಸ್‌ಎಸ್ ವಿದ್ಯಾರ್ಥಿಗಳು ನಮಸ್ತೆ ಕಲೆಕ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರೊಂದಿಗೆ ಸಂವಾದ ನಡೆಸಿದರು.
ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್, ತ್ರಿಶೂರ್‌ಗೆ ಹೋಲಿಸಿದರೆ, ಕಾಸರಗೋಡು ಜಿಲ್ಲೆ ಇನ್ನೂ ಅಭಿವೃದ್ಧಿ ಕಾಣಬೇಕಿದೆ. ಪ್ರವಾಸೋದ್ಯಮ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಗಳು ಭವಿಷ್ಯದಲ್ಲಿ ಜಿಲ್ಲೆಯ ಪ್ರಗತಿಗೆ ಬುನಾದಿಯಾಗಲಿವೆ ಎಂದರು.
ಜಿಲ್ಲೆಯ ಜನರು ಆರೋಗ್ಯ ಸೇವೆಗಳಿಗೆ ಮಂಗಳೂರಿನ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಇಲ್ಲಿಯೇ ಉತ್ತಮ ಆರೋಗ್ಯ ಸೇವೆಗಳು ಸಿಗಬೇಕು ಎಂದು ವಿದ್ಯಾರ್ಥಿಗಳು ಗಮನ ಸೆಳೆದರು. ಕಾಸರಗೋಡು ಜನರಲ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಭವಿಷ್ಯದಲ್ಲಿ ಉತ್ತಮ ಆರೋಗ್ಯ ಸೇವೆಯನ್ನು ಇಲ್ಲಿಯೇ ಪಡೆಯಲು ಸಾಧ್ಯವಿದೆ ಎಂದು ಭರವಸೆ ನೀಡಿದರು.
ಶಾಲೆ ಪರಿಸರದ ರಸ್ತೆಯಲ್ಲಿ ಜೀಬ್ರಾ ಲೈನ್‌ಗಳು ಮತ್ತು ಸೈನ್‌ಬೋರ್ಡ್‌ಗಳ ಕೊರತೆಯ ಬಗ್ಗೆ ವಿದ್ಯಾರ್ಥಿಗಳು ಡಿಸಿ ಗಮನಕ್ಕೆ ತಂದರು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಮತ್ತು ಶಾಲೆಯ ಗ್ರಂಥಾಲಯ ಕೊಠಡಿಯಲ್ಲಿ ವಿದ್ಯುತ್ ಕೊರತೆ ನೀಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಕುಂಜತ್ತೂರು ಜಿವಿಎಚ್‌ಎಸ್‌ಎಸ್‌ನ 15 ಮಕ್ಕಳು ಮತ್ತು ಐವರು ಶಿಕ್ಷಕರು ನಮಸ್ತೆ ಕಲೆಕ್ಟರ್‌ನಲ್ಲಿ ಭಾಗವಹಿಸಿದ್ದರು.