ಪತ್ರಕರ್ತರ ಮಕ್ಕಳಿಗೆ ಕಲಿಕೋಪಕರಣ ವಿತರಣೆ ಹಾಗೂ ಕೃತಿ ಪರಿಚಯ ಕಾರ್ಯಕ್ರಮದಲ್ಲಿ ಶಾಸಕ ಎ.ಕೆ.ಎಂ.ಅಶ್ರಫ್ ಅವರನ್ನು ಅಭಿನಂದಿಸಲಾಯಿತು. ಡಾ.ಪುರುಷೋತ್ತಮ ಬಿಳಿಮಲೆ, ರಾಧಾಕೃಷ್ಣ ಕೆ., ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಡಾ.ಜಯಪ್ರಕಾಶ್ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.
ಉಪ್ಪಳ: ರಾಷ್ಟ್ರೀಯತೆ ಬೆಳೆದಂತೆ ಗಡಿಗಳಿಗೆ ಹೆಚ್ಚು ಮಹತ್ವವಿಲ್ಲ. ಆದರೂ ಸ್ಥಳೀಯ ಸಂಸ್ಕೃತಿ ಉಳಿಸಲು ಪ್ರಯತ್ನಗಳು ಬೇಕು. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಡಿ ಪ್ರದೇಶಗಳ ಭಾಷಾ ಅಭಿವೃದ್ಧಿಗೆ ನೆರವು ನೀಡುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಉಪ್ಪಳ ವ್ಯಾಪಾರಿ ಭವನದಲ್ಲಿ ಶನಿವಾರ ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕಾಸರಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ ಪತ್ರಕರ್ತರ ಮಕ್ಕಳಿಗೆ ಕಲಿಕೋಪಕರಣ ವಿತರಣೆ ಹಾಗೂ ಶಾಫಿ ಬಂಡಸಾಲೆ ಅವರ ಕೃತಿ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯನಿರತ ಕನ್ನಡ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷ ರವಿ ನಾಯ್ಕಪು ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಎಂ.ಶಾಫಿ ಬಂಡಸಾಲೆ, ಆರ್ಯಭಟ ಪ್ರಶಸ್ತಿ ವಿಜೇತ ಪ್ರೊ.ಎ.ಶ್ರೀನಾಥ್ ಕಾಸರಗೋಡು ಹಾಗೂ ಯುವ ವೈದ್ಯೆ ಡಾ.ಷಸಾ ಅವರನ್ನು ಗೌರವಿಸಲಾಯಿತು.
ಕಾರ್ಯನಿರತ ಪತ್ರಕರ್ತರ ಸಂಘದ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ರಾಧಾಕೃಷ್ಣ ಕೆ., ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಗಮಕ ಕಲಾ ಪರಿಷತ್ತು ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್, ಸಾಮಾಜಿಕ ಕಾರ್ಯಕರ್ತೆ ಸುಜಾತಾ ಶೆಟ್ಟಿ, ಅರಿಬೈಲು ಗೋಪಾಲ ಶೆಟ್ಟಿ, ರಾಘವ ಚೇರಾಲು, ಮೊಹಮ್ಮದ್ ಅಝೀಂ ಮಣಿಮುಂಡ, ಇಬ್ರಾಹಿಂ ಕುಂಬಂಕುಝಿ ಉಪಸ್ಥಿತರಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘ ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ಸ್ವಾಗತಿಸಿದರು. ಜಯ ಮಣಿಯಂಪಾರೆ ವಂದಿಸಿದರು. ಪುರುಷೋತ್ತಮ ಭಟ್ ಕೆ. ನಿರೂಪಿಸಿದರು. ಎ.ಆರ್.ಸುಬ್ಬಯ್ಯಕಟ್ಟೆ ಸಹಕರಿಸಿದರು.
ಕಾಸರಗೋಡಿನ ಕನ್ನಡ ಅಸ್ಮಿತೆ ಕಾಪಾಡುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಕೇರಳದ ನೂತನ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಕರಡು ಯೋಜನೆ ರಚಿಸಲಾಗುತ್ತಿದೆ. ಇಲ್ಲಿಯ ಕನ್ನಡ ಉಳಿವಿಗೆ ಪುಷ್ಟಿ ನೀಡಲು ಕೇರಳಂ ಸರ್ಕಾರದ ಮೂಲಕ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು.
— ಎ.ಕೆ.ಎಂ.ಅಶ್ರಫ್, ಮಂಜೇಶ್ವರ ಶಾಸಕ