ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ ಪ್ರಭಾವತಿ ಹಾಗೂ ವಿಶ್ವನಾಥ್ ಶೆಣೈ ಪ್ರಾಯೋಜಿತ ವಿಶ್ವಪ್ರಭಾ ಪುರಸ್ಕಾರಕ್ಕೆ ಶಿಕ್ಷಣ ತಜ್ಞ ಅಶೋಕ ಕಾಮತ್ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನ ಸಂಚಾಲಕ ರವಿರಾಜ್ ಎಚ್.ಪಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಯು 1 ಲಕ್ಷ ರೂ. ಗೌರವ ಧನ ಒಳಗೊಂಡಿದೆ. ಜ.26ರಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ, ಸಂಸ್ಥೆಯ ಮಹಾಪೋಷಕ ಡಾ. ಹರೀಶ್ಚಂದ್ರ, ಉಪಾಧ್ಯಕ್ಷೆ ಸಂಧ್ಯಾ ಶೆಣೈ, ಗೌರವ ಸಲಹೆಗಾರ ಜನಾರ್ದನ್ ಕೊಡವೂರು ಉಪಸ್ಥಿತರಿದ್ದರು.
ಡಾ. ಅಶೋಕ ಕಾಮತ್ ಪರಿಚಯ
ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟೆರಿಯಟ್ನಲ್ಲಿ ಅಸ್ಸಾಂ, ಗುಜರಾತ್ ಮತ್ತು ದೆಹಲಿಗಳಲ್ಲಿ ಕೆಲಸ (1990 ರಿಂದ 1999) ನಿರ್ವಹಿಸಿ, ನಂತರ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿ ನೇಮಕಗೊಂಡು, ವಳಕಾಡು, ಇಂದಿರಾನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪದೋನ್ನತಿಯ ಬಳಿಕ ಉಪನಿರ್ದೇಶಕರ ಕಚೇರಿಯಲ್ಲಿ ಶಿಕ್ಷಣಾಧಿಕಾರಿಯಾಗಿ, ಕುಂದಾಪುರ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಡಯಟ್ ಪ್ರಾಂಶುಪಾಲರಾಗಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಚುನಾವಣೆಯ ಮಾಸ್ಟರ್ ಟೆನರ್ ಆಗಿ ಸ್ಥಳಿಯ ಸಂಸ್ಥೆಗಳು, ವಿಧಾನಸಭೆ, ಲೋಕಸಭಾ ಚುನಾವಣೆಗಳ ಸಂದರ್ಭ ಉಡುಪಿ ಜಿಲ್ಲೆಯಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿರುತ್ತಾರೆ. 2024ರಲ್ಲಿ ರಾಷ್ಟ್ರೀಯ ಮತದಾರ ದಿನ ರಾಜ್ಯಪಾಲ ಥ್ಯಾವರ್ ಚಂದ ಗೆಹ್ಲೋಟ್ ಇವರಿಂದ ರಾಜ್ಯ ಸಂಪನ್ಮೂಲ ವ್ಯಕ್ತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಸಕಾಲ ಯೋಜನೆಯ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ 2000ಕ್ಕೂ ಮಿಕ್ಕ ನೌಕರರಿಗೆ ತರಬೇತಿ ನೀಡಿದ್ದಾರೆ. ಪ್ರಸ್ತುತ ಕುಕ್ಕಿಕಟ್ಟೆಯಲ್ಲಿ ಪತ್ನಿ ರೇವತಿ ಕಾಮತ್, ಪುತ್ರಿ ನವ್ಯಾ ಕಾಮತ್ ಜೊತೆ ವಾಸವಾಗಿದ್ದಾರೆ.