ಉಡುಪಿಯಲ್ಲಿ ಬಡಗುಬೆಟ್ಟು ಸೊಸೈಟಿ ಆಯೋಜಿಸಿದ್ದ ಶೈಕ್ಷಣಿಕ ಕೊಡುಗೆಗಳ ಕಾರ್ಯಕ್ರಮವನ್ನು ಪಿಜಿಆರ್ ಸಿಂಧ್ಯಾ ಉದ್ಘಾಟಿಸಿದರು. ಯಶ್ಪಾಲ್ ಸುವರ್ಣ, ಜಯಕರ್ ಶೆಟ್ಟಿ ಇಂದ್ರಾಳಿ, ಮನೋಹರ್ ಶೆಟ್ಟಿ, ಪುರುಷೋತ್ತಮ್ ಶೆಟ್ಟಿ, ದಾಮೋದರ್ ಶರ್ಮ, ರಾಜೇಶ್ ಶೇರಿಗಾರ್, ಜಾರ್ಜ್ ಸ್ಯಾಮ್ಯುಯೆಲ್ ಇತರರಿದ್ದರು.
* ವಿದ್ಯಾರ್ಥಿಗಳಿಗೆ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಕಿವಿಮಾತು
* ಬಡಗಬೆಟ್ಟು ಸೊಸೈಟಿಯ ಶೈಕ್ಷಣಿಕ ಕೊಡುಗೆ ಕಾರ್ಯಕ್ರಮ ಉದ್ಘಾಟನೆ
ಉಡುಪಿ: ರಾಜ್ಯದ ಆರ್ಥಿಕ ಪ್ರಗತಿಗೆ ಕಾರಣವಾಗಿರುವ ಸಹಕಾರಿ ಸಂಘಗಳು ತಮ್ಮ ಲಾಭದ ಪಾಲನ್ನು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸುತ್ತಿರುವುದು ಮಾದರಿ ಕಾರ್ಯವಾಗಿದೆ. ವಿದ್ಯಾರ್ಥಿಗಳು ಪರಿಸರ ಜ್ಞಾನ, ಮೌಲ್ಯ ಹೆಚ್ಚಿಸಿಕೊಂಡು ಪ್ರಕೃತಿಯಲ್ಲಿರುವ ಎಲ್ಲ ಜೀವಿಗಳನ್ನೂ ಪ್ರೀತಿಸಬೇಕು. ಸಮಾಜದಲ್ಲಿರುವ ಎಲ್ಲ ಧಮೀರ್ಯರನ್ನು ಗೌರವಿಸುತ್ತ ನಮ್ಮ ಧರ್ಮ ಪಾಲನೆ ಮಾಡಬೇಕು ಎಂದು ಮಾಜಿ ಸಚಿವ, ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ರಾಜ್ಯ ಪ್ರಧಾನ ಆಯುಕ್ತ ಪಿಜಿಆರ್ ಸಿಂಧ್ಯಾ ಕಿವಿಮಾತು ಹೇಳಿದರು.
ಉಡುಪಿಯ ಪುರಭವನದಲ್ಲಿ ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಶನಿವಾರ (ಜೂ.27) ಆಯೋಜಿಸಿದ್ದ ಉಡುಪಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ವೆಚ್ಚದಲ್ಲಿ ಉಚಿತ ನೋಟ್ ಬುಕ್, ಸಮವಸ್ತ್ರ, ಶೈಕ್ಷಣಿಕ ಪರಿಕರ, ಗಿಡ ವಿತರಣೆ ಹಾಗೂ ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳಿದ್ದರೂ ಸಮರ್ಪಣಾ ಮನೋಭಾವದಿಂದ ಸೌಕರ್ಯ, ಸಹಾಯ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ, ಆ ಕೊರತೆಯನ್ನು ಜಿಲ್ಲೆಯಲ್ಲಿರುವ ಸಹಕಾರಿ ಸಂಘಗಳು ನೀಗಿಸುತ್ತಿವೆ. ತನ್ನ ಲಾಭಾಂಶದಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರದ ಸೇವೆಯಿಂದ ದೇಶಕ್ಕೆ ಮಾದರಿಯಾಗಿದೆ ಎಂದರು.
ಉಡುಪಿಯ ಡಯಟ್ ಪ್ರಾಂಶುಪಾಲ ಡಾ. ಅಶೋಕ್ ಕಾಮತ್, ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ನಿಬಂಧಕ ಸುಧೀರ್ ಕುಮಾರ್ ಜೆ., ಉದ್ಯಮಿ ಪುರುಷೋತ್ತಮ್ ಶೆಟ್ಟಿ, ಸಾಯಿರಾಧಾ ಗ್ರೂಪ್ನ ಪ್ರವರ್ತಕ ಮನೋಹರ್ ಶೆಟ್ಟಿ, ಬಡಗಬೆಟ್ಟು ಸೊಸೈಟಿಯ ಉಪಾಧ್ಯಕ್ಷ ಜಾರ್ಜ್ ಸ್ಯಾಮ್ಯುಯೆಲ್, ಬ್ಯಾಂಕ್ನ ನಿರ್ದೇಶಕರಾದ ಜಯಾ ಶೆಟ್ಟಿ, ಗಾಯತ್ರಿ ಎಸ್. ಭಟ್, ಪದ್ಮನಾಭ ನಾಯಕ್, ಸದಾಶಿವ ನಾಯಕ್, ಎಲ್.ಉಮಾನಾಥ್ ಇತರರು ಉಪಸ್ಥಿತರಿದ್ದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿದ್ಯಾರ್ಥಿಗಳಿಗೆ ವಿದ್ವಾನ್ ದಾಮೋದರ್ ಶರ್ಮ ಬಾರ್ಕೂರು ಅವರು ಪಾಲಕರ ಶ್ರಮ, ವಿದ್ಯಾರ್ಥಿ ಜೀವನ, ಸಾಧನೆಯ ಮಾರ್ಗ ಹೇಗಿರಬೇಕೆಂಬ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರಣೀತ್ ಬಳಕೂರಾಯ ಪ್ರಾರ್ಥಿಸಿದರು. ಬಡಗಬೆಟ್ಟು ಸೊಸೈಟಿಯ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಪೆ ಶಾಖೆಯ ವ್ಯವಸ್ಥಾಪಕ ನವೀನ್ ಕೆ. ಮತ್ತು ಕುಂದಾಪುರ ಶಾಖೆಯ ವ್ಯವಸ್ಥಾಪಕ ಸಮರ್ಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಡಗುಬೆಟ್ಟು ಸೊಸೈಟಿ ಉಡುಪಿಯ ಜನರಲ್ ಮೆನೇಜರ್ ರಾಜೇಶ್ ಶೇರಿಗಾರ್ ವಂದಿಸಿದರು.
7 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೆರವು
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳ 24 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 5 ಲಕ್ಷ ರೂ. ಅಧಿಕ ಮೊತ್ತದ ಸಹಾಯಧನದೊಂದಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. 45 ಕನ್ನಡ ಮಾಧ್ಯಮ ಶಾಲೆಗಳಿಗೆ ನೋಟ್ಬುಕ್, 8 ಶಾಲೆಗಳಿಗೆ ಸಮವಸ್ತ್ರ, ಉಡುಪಿ ಕ್ರಿಶ್ಚಿಯನ್ ಪ.ಪೂ. ಕಾಲೇಜಿಗೆ ಕಂಪ್ಯೂಟರ್, ಶಾಲಾ ಶಿಕ್ಷಕರಿಗೆ ಕೊಡುಗೆ ವಿತರಿಸಲಾಯಿತು. ಸುಮಾರು 7 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶೈಕ್ಷಣಿಕ ನೆರವು ಪಡೆದರು.
ಈ ಹಿಂದೆ ತೇರ್ಗಡೆ ಹೊಂದಲು 35 ಅಂಕ ಗಳಿಸುವ ಮಾನದಂಡವಿತ್ತು. ಇದೀಗ ಪರೀಕ್ಷೆಯಲ್ಲಿ 20 ಮಾರ್ಕ್ಸ್, ಶಾಲೆಯಿಂದ ಉಚಿತವಾಗಿ ಕೊಡುವ 13 ಗ್ರೇಸ್ ಸೇರಿ 33 ಅಂಕ ಗಳಿಸಿದರೆ ಪಾಸ್. ಇದೆಂತಹ ಶಿಕ್ಷಣ ವ್ಯವಸ್ಥೆ? ನಾನು ಯಾವುದೇ ಸರ್ಕಾರವನ್ನೂ ಟೀಕಿಸುತ್ತಿಲ್ಲ. ಶೈಕ್ಷಣಿಕ ಫಲಿತಾಂಶ ಹೆಚ್ಚಳಕ್ಕೆ ಹೀಗೆ ಮಾಡುವುದು ಸೂಕ್ತವಲ್ಲ ಎನ್ನುವುದು ನನ್ನ ವೈಯಕ್ತಿಕ ವಿಚಾರ.
— ಪಿಜಿಆರ್ ಸಿಂಧ್ಯಾ. ಮಾಜಿ ಸಚಿವ.