ಉಜಿರೆ ಎಸ್‌ಡಿಎಂ ತಾಂತ್ರಿಕ ವಿದ್ಯಾಲಯದಲ್ಲಿ ಐದು ದಿನಗಳ ರಾಷ್ಟ್ರೀಯಮಟ್ಟದ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರಕ್ಕೆ ಡಾ.ಕೆ.ಸತ್ಯಮೂರ್ತಿ ಚಾಲನೆ ನೀಡಿದರು. ಪೂರನ್ ವರ್ಮ, ಡಾ.ಸಂದೀಪ್ ಆರ್. ಮೊದಲಾದವರಿದ್ದರು.
ಬೆಳ್ತಂಗಡಿ: ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಯಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಅಧ್ಯಾಪಕರ ಅಭಿವೃದ್ಧಿ ಕಾರ್ಯಗಾರ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಸಂಶೋಧನಾ ನಿರ್ದೇಶಕ ಡಾ.ಕೆ.ಸತ್ಯಮೂರ್ತಿ ಹೇಳಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ, ವಿಜ್ಞಾನ ಹಾಗೂ ಗ್ರಂಥಾಲಯ ವಿಭಾಗ ಮತ್ತು ಮಹಾವಿದ್ಯಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಕೋಶಗಳ ಸಂಯುಕ್ತ ಆಶ್ರಯದಲ್ಲಿ ಐದು ದಿನಗಳ ರಾಷ್ಟ್ರೀಯಮಟ್ಟದ ಅಧ್ಯಾಪಕರ ಅಭಿವೃದ್ಧಿ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಪ್ರಾಂಶುಪಾಲ ಡಾ.ಸಂದೀಪ್ ಆರ್. ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ.ಎಸ್.ಎನ್.ಕಾಕತ್ಕಾರ್, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ್ ಪಿ., ಡೀನ್ ಡಾ.ಸೌಮ್ಯಾ ಬಿ.ಪಿ., ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಸಂತೋಷ್, ಕಾರ್ಯಾಗಾರ ಆಯೋಜನಾ ಸಮಿತಿ ಕಾರ್ಯದರ್ಶಿಗಳಾದ ಡಾ.ವಿದ್ಯಾ ಕೆ., ಡಾ.ನಿತ್ಯಾನಂದ ಬಿ., ಡಾ.ಗಿರೀಶ್ ಕುಮಾರ್, ಡಾ.ರವೀಶ್ ಪಡುಮಲೆ, ಡಾ.ತ್ಯಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.
ಡಾ.ನವೀನ್ ಕುಮಾರ್ ಸ್ವಾಗತಿಸಿದರು. ಮನೀಷ್ ಮತ್ತು ರಕ್ಷಿತ್ ನಿರೂಪಿಸಿದರು. ಡಾ.ರಜತಾ ಪಿ.ಶೆಟ್ಟಿ ವಂದಿಸಿದರು. 200ಕ್ಕೂ ಅಧಿಕ ನೋಂದಾಯಿತ ಅಭ್ಯರ್ಥಿಗಳು ಭಾಗವಹಿಸಿದ್ದರು.
ಕೃತಕ ಬುದ್ಧಿಮತ್ತೆಯಂತಹ ಆವಿಷ್ಕಾರಗಳ ಜತೆಗೆ ಹೊಂದಿಕೊಂಡು ಹೋಗುವ ಕ್ಷಮತೆಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರವೂ ತಂತ್ರಜ್ಞಾನದ ಬದಲಾವಣೆ ಮತ್ತು ಬೆಳವಣಿಗೆಯೊಂದಿಗೆ ಹೆಜ್ಜೆ ಹಾಕಿದಾಗ ಮಾತ್ರ ಉನ್ನತ ಹಂತವನ್ನು ತಲುಪಲು ಸಾಧ್ಯ.
— ಪೂರನ್ ವರ್ಮ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಸಿಇಒ