ಈಸ್ಟರ್ ಜಾಗರಣೆ ನಿಮಿತ್ತ ಬೃಹತ್ ಕ್ಯಾಂಡಲ್ ಬೆಳಗಿದ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಚರ್ಚ್ನ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಿದರು. ಫರ್ಡಿನಾಂಡ್ ಗೊನ್ಸಾಲ್ವಿಸ್, ಪ್ರದೀಪ್ ಕಾಡೋರ್ಜಾ, ರೆಜಿನಾಲ್ಡ್ ಪಿಂಟೊ, ಪರೇಲ್, ಪೀಟರ್ ಮೆಂಡೊನ್ಸಾ ಇದ್ದರು.
* ಡಾ. ಜೆರಾಲ್ಡ್ ಐಸಾಕ್ ಲೋಬೊ ಸಂದೇಶ
* ಚರ್ಚ್ನಲ್ಲಿ ಈಸ್ಟರ್ ಜಾಗರಣೆಯ ಸಂಭ್ರಮ
ಉಡುಪಿ: ಯೇಸುಕ್ರಿಸ್ತರ ಪುನರುತ್ಥಾನದಿಂದ ಕೆಸ್ತ ಸಮುದಾಯದಲ್ಲಿ ಮತ್ತೊಮ್ಮೆ ಸಂತಸ ಮತ್ತು ಭರವಸೆ ತಂದಿತು. ಸ್ವಾಮಿಯ ಮರಣದಿಂದ ಭರವಸೆ ಕಳೆದುಕೊಂಡಿದ್ದ ಶಿಷ್ಯರಿಗೆ ಚೈತನ್ಯ ಬಂದಿತು. ಯೇಸು ಸ್ವಾಮಿಯ ಮರಣ ಮತ್ತು ಪುನರುತ್ಥಾನದ ಘಟನೆ ಕ್ರೈಸ್ತ ಧರ್ಮದ ನೈಜ ತಿರುಳು. ಯೇಸುಕ್ರಿಸ್ತರ ಪುನರುತ್ಥಾನ ಕೇವಲ ಐತಿಹಾಸಿಕ ಘಟನೆಯಲ್ಲ. ಅದು ಜಗತ್ತಿಗೆ ಭರವಸೆ ಮತ್ತು ಶಾಂತಿಯ ಸಂಕೇತವಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ನುಡಿದರು.
ಉಡುಪಿಯ ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್ ಚರ್ಚ್ನಲ್ಲಿ ಶನಿವಾರ (ಏ.4) ರಾತ್ರಿ ಆಯೋಜಿಸಿದ್ದ ಯೇಸು ಕ್ರಿಸ್ತರು ಶಿಲುಬೆಗೇರಿ ಪುನರುತ್ಥಾನರಾದ ಈಸ್ಟರ್ ಜಾಗರಣೆ ನಿಮಿತ್ತ ಸಂದೇಶ ನೀಡಿದರು. ಜಗತ್ತಿನ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ಕಲಹ ಮಾನವ ಜೀವ ಹಾನಿಯಾಗುತ್ತಿದ್ದು ವಿಶ್ವದ ನಾಯಕರು ಶಾಂತಿಯ ಮೂಲಕ ಸಮಸ್ಯೆ ಬಗೆಹರಿಸಲಿ ಎಂದು ಪ್ರಾರ್ಥಿಸಿದರು.
ಬೃಹತ್ ಕ್ಯಾಂಡಲ್ನ ಮೆರವಣಿಗೆ
ಬೃಹತ್ ಗಾತ್ರದ ಈಸ್ಟರ್ ಕ್ಯಾಂಡಲ್ ಹಚ್ಚಿ ಮೆರವಣಿಗೆಯಲ್ಲಿ ಸಾಗಿ ಬಂದು ಚರ್ಚ್ನ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಹಳೆಯ ಹಾಗೂ ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನ ಮಾಡಲಾಯಿತು. ಧರ್ಮಾಧ್ಯಕ್ಷರು ಮತ್ತು ಧರ್ಮಗುರುಗಳು ಹೊಸ ನೀರಿನ ಆಶೀರ್ವಚನ ನೆರವೇರಿಸಿ, ಭಕ್ತಾದಿಗಳ ಮೇಲೆ ಪ್ರೋಕ್ಷಿಸಿ ಆಶೀರ್ವದಿಸಿದರು.
ಬಳಿಕ ನಡೆದ ಬಲಿಪೂಜೆಯಲ್ಲಿ ಯೇಸುವಿನ ಕಷ್ಟಗಳು, ಪುನರುತ್ಥಾನದ ಸಂದೇಶ ವಿವರಿಸಿದ ಧರ್ಮಗುರುಗಳು ಕ್ರೈಸ್ತ ವಿಶ್ವಾಸ, ಸತ್ಯದ ಮರು ದೃಢೀಕರಣ ನಡೆಸಿದರು. ಕ್ರೈಸ್ತರು ಈಸ್ಟರ್ ಹಬ್ಬದ ಶುಭಾಶಯದೊಂದಿಗೆ ಸಂಭ್ರಮಿಸಿದರು.
ಚರ್ಚ್ನ ಪ್ರಧಾನ ಧರ್ಮಗುರು ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ.ಪ್ರದೀಪ್ ಕಾಡೋರ್ಜಾ, ಸಂಪದ ನಿರ್ದೇಶಕ ವಂ.ರೆಜಿನಾಲ್ಡ್ ಪಿಂಟೊ, ಪಿಲಾರ್ ಸಭೆಯ ವಂ.ಪರೇಲ್, ಅತಿಥಿ ಧರ್ಮಗುರು ವಂ.ಪೀಟರ್ ಮೆಂಡೊನ್ಸಾ ಉಪಸ್ಥಿತರಿದ್ದರು.
ಕ್ರೈಸ್ತರಿಗೆ ಪ್ರಮುಖ ಹಬ್ಬ
ಯೇಸು ಕ್ರಿಸ್ತರು ಶಿಲುಬೆಗೇರಿ ಪುನರುತ್ಥಾನರಾದ ಈಸ್ಟರ್ ಜಾಗರಣೆಯನ್ನು ಕ್ರೈಸ್ತರು ಜಿಲ್ಲಾದ್ಯಂತ ಶ್ರದ್ಧಾ-ಭಕ್ತಿ, ಸಂಭ್ರಮದಿಂದ ಆಚರಿಸಿದರು. ಕೆಸ್ತರು ವಿಭೂತಿ ಬುಧವಾರದಿಂದ ಆರಂಭಿಸಿ 40 ದಿನಗಳ ಉಪವಾಸ ವ್ರತ ಹಾಗೂ ಧ್ಯಾನದಲ್ಲಿ ಯೇಸುವಿನ ಕಷ್ಟಗಳನ್ನು ನೆನೆದು, ಈಸ್ಟರ್ ಹಬ್ಬದಂದು ಯೇಸುವಿನ ಪುನರುತ್ಥಾನವರೆಗಿನ ತಿಂಗಳ ಕಷ್ಟಗಳ ತಪಸ್ಸಿಗೆ ಕೊನೆ ಹೇಳುತ್ತಾರೆ. ಈಸ್ಟರ್ ಹಬ್ಬವೂ ಸಹ ಕ್ರಿಸ್ಮಸ್ ಹಬ್ಬದಂತೆ ಕ್ರೈಸ್ತರಿಗೆ ಪ್ರಮುಖ ಹಬ್ಬವಾಗಿದೆ.