ಸ್ಫೋಟಕದಿಂದ ಹಾನಿಯಾದ ಸ್ಥಳಕ್ಕೆ ಬೆಳ್ತಂಗಡಿ ಡಿವೈಎಸ್‌ಪಿ ರೋಹಿಣಿ ಸಿ.ಕೆ. ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಕಡಬ: ಬಾವಿ ತೋಡುವ ಸಂದರ್ಭದಲ್ಲಿ ಸ್ಫೋಟಕ ಸಿಡಿದು ಮನೆಗಳಿಗೆ ಹಾನಿಯಾಗಿರುವ ರಾಮಕುಂಜ ಗ್ರಾಮದ ಕಂಪಕ್ಕೆ ಬೆಳ್ತಂಗಡಿ ಡಿವೈಎಸ್‌ಪಿ ರೋಹಿಣಿ ಸಿ.ಕೆ. ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ರಾಮಕುಂಜ ಗ್ರಾಮದ ಕಂಪದಲ್ಲಿ ಮೈಸೂರು ನಿವಾಸಿ ಸೋಮಶೇಖರ ಎಂಬುವರ ಜಾಗದಲ್ಲಿ ನೀರಿಗಾಗಿ ಬಾವಿ ತೋಡುವ ವೇಳೆ ಕಲ್ಲುಬಂಡೆ ಸಿಕ್ಕಿತ್ತು. ಕೋಡಿಂಬಾಳ ನಿವಾಸಿ ಶಿವರಾಮ ಎಂಬುವರು ಬಾವಿಯೊಳಗೆ ಸ್ಫೋಟಕ ಸ್ಫೋಟಿಸಿದ ಪರಿಣಾಮ ಪರಿಸರದ ವಾಮನ ಮೂಲ್ಯ ಹಾಗೂ ಕೆ.ಟಿ.ಮೋಹನ ಎಂಬುವರ ಮನೆಗೆ ಹಾನಿಯಾಗಿತ್ತು. ಮನೆಯವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿತ್ತು.
ಈ ಮಧ್ಯೆ, ಬಾವಿಯೊಳಗೆ ಸ್ಫೋಟಗೊಳ್ಳದೆ ಬಾಕಿಯಾದ ಸ್ಫೋಟಕಗಳ ತೆರವಿಗಾಗಿ ಮಂಗಳೂರಿನ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಮಂಗಳವಾರ ಕಾರ್ಯಾಚರಣೆ ಕೈಗೊಂಡಿದ್ದರು. 6 ಜೀವಂತ ಸ್ಫೋಟಕಗಳ ಪೈಕಿ ಒಂದನ್ನು ತೆರವುಗೊಳಿಸಿ ಉಳಿದ ಸ್ಫೋಟಕಗಳನ್ನು ಕಂಪ್ರೆಸರ್ ಬಳಸಿ ತೆರವುಗೊಳಿಸಲು ನಿರ್ಧರಿಸಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಕೋರ್ಟ್ ಅನುಮತಿಗೆ ನಿರ್ಧಾರ
ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್‌ಪಿ ರೋಹಿಣಿ ಸಿ.ಕೆ., ಕಂಪ್ರೆಸರ್ ಬಳಸಿ ಬಾವಿಯೊಳಗಿರುವ ಸ್ಫೋಟಕ ತೆರವುಗೊಳಿಸುವುದು ಅಪಾಯಕಾರಿಯಾಗಿರುವುದರಿಂದ ಕೋರ್ಟ್ ಅನುಮತಿ ಪಡೆದು ಬಳಿಕ ಕಾರ್ಯಾಚರಣೆ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಕಡಬ ಎಸ್‌ಐ ಜಂಬೂರಾಜ್ ಮಹಾಜನ್, ಸಿಬ್ಬಂದಿ ಉಪಸ್ಥಿತರಿದ್ದರು.