ಕರ್ತವ್ಯಬೋಧ ದಿನಾಚರಣೆಯಲ್ಲಿ ನಿವೃತ್ತ ಪ್ರಾಧ್ಯಾಪಕರನ್ನು ಸಮ್ಮಾನಿಸಲಾಯಿತು. 
ಉಡುಪಿ

ಸಮಾಜದಲ್ಲಿ ಶಿಕ್ಷಕರಿಗೆ ಗುರುತರ ಹೊಣೆಗಾರಿಕೆ: ಡಾ.ವಾದಿರಾಜ

ಉಡುಪಿ: ಜಗತ್ತು ಅತ್ಯಂತ ವೇಗವಾಗಿ ಬದಲಾವಣೆಗೆ ಒಳಗಾಗುತ್ತಿದೆ. ತಂತ್ರಜ್ಞಾನದ ಯುಗದಲ್ಲಿ ಶಿಕ್ಷಣ ಪದದ ವ್ಯಾಪ್ತಿ ವ್ಯಾಪಕವಾಗಿ ಹಿಗ್ಗುತ್ತಿದೆ. ವಿದ್ಯಾರ್ಥಿಗಳ ನಡುವೆ ಮಾತ್ರವಲ್ಲದೆ ಅಧ್ಯಾಪಕರ ಹಾಗೂ ಶಾಲೆಗಳ ನಡುವೆಯೂ ಸ್ಪರ್ಧೆ ನಿಮಾರ್ಣವಾಗುತ್ತಿದೆ. ಕಲೆ, ಸಂಗೀತ, ಸಾಹಿತ್ಯ ಇವೆಲ್ಲವೂ ಕಾಲಕ್ಕೆ ತಕ್ಕಂತೆ ವಿಕಸನಗೊಳ್ಳುತ್ತಿವೆ. ಮಾರುಕಟ್ಟೆ ಅಧಾರಿತ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿರುವ ಸಂದರ್ಭದಲ್ಲಿಯೇ ಶಿಕ್ಷಕರು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಎಂ.ಐ.ಟಿ ಪ್ರಾಧ್ಯಾಪಕ ಡಾ.ವಾದಿರಾಜ ಗೋಪಾಡಿ ಅಭಿಪ್ರಾಯಪಟ್ಟರು.

ಗುರುವಾರ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಸಹಯೋಗದೊಂದಿಗೆ ನಡೆದ ಕರ್ತವ್ಯಬೋಧ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಭಾವನಾತ್ಮಕ ಮತ್ತು ರಚನಾತ್ಮಕ ಯೋಜನೆಗಳ ಮೂಲಕ ಮುಂದಿನ ಪೀಳಿಗೆಯನ್ನು ಬದುಕು ಮತ್ತು ಭಾರತಕ್ಕಾಗಿ ಸಶಕ್ತಗೊಳಿಸಬೇಕಿದೆ. ಅದಕ್ಕಾಗಿ ಶಿಕ್ಷಕರು ಸಂಘಟಿತರಾಗಬೇಕಾದದ್ದು ಇಂದಿನ ಅನಿವಾರ್ಯತೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಕಾಂತ್​ ಭಟ್​ ವಹಿಸಿಕೊಂಡಿದ್ದರು. ಕೆ.ಆರ್​.ಎಂ.ಎಸ್​ ಎಸ್​ ನ ರಾಜ್ಯ ಕಾರ್ಯದರ್ಶಿ ಡಾ. ಮಾಧವ ಎಂ.ಕೆ. ಮುಖ್ಯ ಅಭ್ಯಾಗತರಾಗಿದ್ದರು. ಕಾರ್ಯಕ್ರಮದಲ್ಲಿ 24-25 ನೇ ಸಾಲಿನಲ್ಲಿ ನಿವೃತ್ತರಾದ ಪ್ರಾಧ್ಯಾಪಕರನ್ನು ಸಮ್ಮಾನಿಸಲಾಯಿತು. ಪ್ರೊ. ವಿದ್ಯಾ ಅಮ್ಮಣ್ಣಾಯ ಪ್ರಾರ್ಥಿಸಿ, ಸಂಘದ ಉಡುಪಿ ಜಿಲ್ಲಾಧ್ಯಕ್ಷ ಡಾ. ಸುರೇಂದ್ರ ಶೆಟ್ಟಿ ಅವರು ಸ್ವಾಗತಿಸಿದರು. ಡಾ.ಪ್ರಜ್ಞಾ ಮಾರ್ಪಳ್ಳಿ ಕಾರ್ಯಕ್ರಮ ನಿರೂಪಿಸಿ, ಡಾ. ಭೈರವಿ ಪಂಡ್ಯ ವಂದಿಸಿದರು.