ಚುಟುಕು ಕವನಗಳ ಕವಿ ಎಚ್.ಡುಂಡಿರಾಜ್, ವೈದ್ಯ ಡಾ. ಲಕ್ಷ್ಮಣ್ ವಿ.ಎ., ಕಲಾವಿದೆ ಡಾ. ಮೀರಾ ಎಚ್.ಎನ್.
* ಕಸಾಪ ಉಡುಪಿ ಅಧ್ಯಕ್ಷ ರವಿರಾಜ್ ಎಚ್.ಪಿ. ಮಾಹಿತಿ
* 2 ಪುಸ್ತಕ ಬಿಡುಗಡೆ, ಏಕವ್ಯಕ್ತಿ ರಂಗ ಪ್ರಯೋಗ
ಉಡುಪಿ: ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಆಶ್ರಯದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ, ವಿಶ್ವಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಸೆ.6ರಂದು ಸಂಜೆ 4 ಗಂಟೆಯಿಂದ ಅಂಬಲಪಾಡಿಯ ಭವಾನಿ ಮಂಟಪದಲ್ಲಿ 'ಡುಂಡಿ-70' ಅಭಿನಂದನಾ ಸಮಾರಂಭ, ಪುಸ್ತಕ ಬಿಡುಗಡೆ ಹಾಗೂ ಕವಿ ಕುರಾಡಿ ಸೀತಾರಾಮ ಆಡಿಗ ಕಾವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮಕ್ಕೂ ಮೊದಲು ಪ್ರಸಿದ್ಧ ಕಲಾವಿದೆ ಡಾ. ಮೀರಾ ಎಚ್.ಎನ್. ಅಭಿನಯದ, ಡಾ. ಬೇಲೂರು ರಘುನಂದನ್ ಅವರ ರಚನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ 'ಪಂಚವರ್ಣೆ' ಏಕವ್ಯಕ್ತಿ ರಂಗ ಪ್ರಯೋಗ ನಡೆಯಲಿದೆ.
ಸಂಜೆ 5:15ಕ್ಕೆ ಕವಿ ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದಾರೆ. ಕವಿ, ಕತೆಗಾರ ಮತ್ತು ವೈದ್ಯರಾದ ಡಾ. ಲಕ್ಷ್ಮಣ್ ವಿ.ಎ. ಅವರಿಗೆ ಪ್ರಸಿದ್ಧ ಸಾಹಿತಿ ಎಚ್. ಡುಂಡಿರಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪುಸ್ತಕ ಬಿಡುಗಡೆ
ಸಂಜೆ 6 ಗಂಟೆಗೆ "ಡುಂಡಿ&70' ಅಭಿನಂದನಾ ಸಮಾರಂಭ ಹಾಗೂ ಎಚ್.ಡುಂಡಿರಾಜ್ ಅವರ ಡುಂಡಿ ಯಾತ್ರೆ, ಫೇಸ್ಬುಕ್ನಲ್ಲಿ ಸಾಕ್ಷಾತ್ಕಾರ ಎಂಬ ಎರಡು ಪುಸ್ತಕ ಬಿಡುಗಡೆಯಾಗಲಿದೆ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಡಾ. ಗಣನಾಥ ಶೆಟ್ಟಿ ಎಕ್ಕಾರು ಅಭಿನಂದನಾ ಮಾತುಗಳನ್ನಾಡಲಿದ್ದು, ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಕೃತಿ ಪರಿಚಯ ಮಾಡಲಿದ್ದಾರೆ ಎಂದು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ತಿಳಿಸಿದ್ದಾರೆ.