ಕೈಕಂಬ ಸೇತುವೆಗೆ ತ್ಯಾಜ್ಯಗಳ ಡಂಪಿಂಗ್ ಸ್ಥಳವಾಗಿ ಪರಿವರ್ತನೆಯಾಗಿರುವುದು
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಜನರು ವಿದ್ಯಾವಂತ, ಬುದ್ಧಿವಂತರಾದಷ್ಟು ಅನಾಗರಿಕರಂತೆ ವರ್ತನೆ ಹೆಚ್ಚುತ್ತಿದೆ ಎಂಬುದಕ್ಕೆ ಉತ್ತಮ ಉದಾಹರಣೆ ನಾವೂರು ಗ್ರಾಮದ ಕೈಕಂಬ ಸೇತುವೆ. ತ್ಯಾಜ್ಯಗಳನ್ನು ತಂದು ಸೇತುವೆ ಕೆಳಗೆ ಹರಿಯುವ ನದಿ ನೀರಿಗೆ ಸುರಿಯುವುದು ಇಲ್ಲಿ ಮಾಮೂಲಾಗಿದೆ.
ಸಭೆ, ಸಮಾರಂಭಗಳಲ್ಲಿ ಉಪಯೋಗಿಸುವ ಪ್ಲಾಸ್ಟಿಕ್, ಹಾಳೆ ತಟ್ಟೆಗಳು, ಪ್ಲಾಸ್ಟಿಕ್ ಚೀಲಗಳು , ಬಾಟಲಿಗಳು, ಲೋಟಗಳು, ಬಿಯರ್ ಬಾಟಲಿಗಳು, ಸ್ಯಾನಿಟರಿ ನ್ಯಾಪ್‌ಕಿನ್, ಮಕ್ಕಳು ಮತ್ತು ಹಾಸಿಗೆ ಹಿಡಿದಿರುವವರ ಪ್ಯಾಂಪರ್ಸ್, ಸಲೂನ್‌ಗಳಲ್ಲಿ ಕತ್ತರಿಸಿದ ತಲೆಗೂದಲನ್ನು ಗೋಣಿಯಲ್ಲಿ ತಂದು ಇಲ್ಲಿ ಸುರಿಯುತ್ತಾರೆ. ಕೈಕಂಬ ಸೇತುವೆಯ ನದಿ ತೀರ ತ್ಯಾಜ್ಯಗಳ ಡಂಪಿಂಗ್ ಯಾರ್ಡ್‌ನಂತೆ ಗೋಚರಿಸುತ್ತದೆ.
ಸ್ವಚ್ಛ ಭಾರತ ಸೇರಿದಂತೆ ಹತ್ತಾರು ಕಾನೂನು, ಯೋಜನೆ, ಅಭಿಯಾನಗಳು ಜಾರಿಯಲ್ಲಿದ್ದರೂ ಗಾಂಧಿ ಜಯಂತಿಯಂದು ಒಂದು ದಿನಕ್ಕೆ ಸ್ವಚ್ಛತಾ ಕಾರ್ಯ ಸೀಮಿತವಾಗಿದೆ. ಗ್ರಾಮ ಪಂಚಾಯಿತಿಗಳು ಸ್ವಚ್ಛತೆಗಾಗಿ ವರ್ಷಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ವಿದ್ಯಾವಂತ, ಬುದ್ಧಿವಂತ ಜನರು ಮಾತ್ರ ತ್ಯಾಜ್ಯಗಳನ್ನು ನದಿ, ಸೇತುವೆ, ರಸ್ತೆ ಬದಿಯಲ್ಲಿ ಎಸೆಯುತ್ತಾ ಸ್ವಚ್ಛತೆಗೆ ಸವಾಲು ಹಾಕುವ ನೀಚತನ ಪ್ರದರ್ಶಿಸುತ್ತಾರೆ.
ಸಿಸಿ ಕ್ಯಾಮರಾ ಅಳವಡಿಸಿ
ಗ್ರಾಮ ಪಂಚಾಯಿತಿಗಳು ಕಸ ಬಿಸಾಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಅಗತ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದರೆ ಸ್ವಚ್ಛ ಭಾರತ ಪರಿಕಲ್ಪನೆ ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಸಾಧ್ಯ ಎಂಬುದು ಸ್ಥಳೀಯರು ಅಭಿಪ್ರಾಯ.