ಕುರ್ನಾಡು ಪಿಯು ಕಾಲೇಜು ಬಳಿ ರಸ್ತೆ ಬದಿ ತ್ಯಾಜ್ಯ ರಾಶಿ ಹಾಕಿರುವುದು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಘನತ್ಯಾಜ್ಯ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕುರ್ನಾಡು ಘಟಕ ವ್ಯವಸ್ಥಿತ ನಿರ್ವಹಣೆಯಿಲ್ಲದೆ ಸೊರಗಿದ್ದು, ಇದೀಗ ಸಾರ್ವಜನಿಕ ರಸ್ತೆಯಲ್ಲೇ ಕಸದ ರಾಶಿ ಹಾಕುವಂತ ದುಸ್ಥಿತಿ ಎದುರಾಗಿದೆ. ಗುತ್ತಿಗೆದಾರರ ಮತ್ತು ಪಂಚಾಯಿತಿ ನಿರ್ಲಕ್ಷ್ಯದಿಂದಾಗಿ ರಸ್ತೆ ಬದಿಯೇ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದ್ದು, ಜನಸಾಮಾನ್ಯರು ಮೂಗು ಮುಚ್ಚಿ ಓಡಾಡುವಂತಾಗಿದೆ.
ಮಾದರಿ ಘಟಕಕ್ಕೆ ದುಸ್ಥಿತಿ
2011-12ನೇ ಸಾಲಿನಲ್ಲಿ ಗ್ರಾಮ ಹಾಗೂ ಜಿಲ್ಲಾ ಪಂಚಾಯಿತಿಯ 3 ಲಕ್ಷ ರೂ. ಅನುದಾನದಲ್ಲಿ ಮುಡಿಪುವಿನ ಬಾಳೆಪುಣಿ ಗ್ರಾಪಂ. ಜಮೀನಿನಲ್ಲಿ ಈ ಘಟಕ ಸ್ಥಾಪಿಸಲಾಗಿತ್ತು. ಆರಂಭದಲ್ಲಿ ಪ್ಲಾಸ್ಟಿಕ್ ಮರುಬಳಕೆ ಹಾಗೂ ಹಸಿಕಸದಿಂದ ಗೊಬ್ಬರ ತಯಾರಿಸುವ ಮೂಲಕ ‘ಸ್ವಚ್ಛ ಗ್ರಾಮ’ ಪುರಸ್ಕಾರಕ್ಕೂ ಕುರ್ನಾಡು ಪಾತ್ರವಾಗಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ನಿರ್ವಹಣಾ ವೈಫಲ್ಯದಿಂದಾಗಿ ಘಟಕ ದುರ್ನಾತದ ಕೇಂದ್ರವಾಗಿ ಮಾರ್ಪಟ್ಟಿತ್ತು. ಸ್ಥಳೀಯರ ನಿರಂತರ ಪ್ರತಿಭಟನೆಯ ಫಲವಾಗಿ ವರ್ಷದ ಹಿಂದೆ ಈ ಘಟಕವನ್ನು ತೆರವುಗೊಳಿಸಲಾಯಿತು.
ವಿದ್ಯಾರ್ಥಿಗಳಿಗೆ ತೊಂದರೆ
ಸದ್ಯ ಪಂಚಾಯಿತಿ ಬಳಿ ಸ್ವಂತ ಘಟಕವಿಲ್ಲದ ಕಾರಣ, ಹಸಿಕಸವನ್ನು ಖಾಸಗಿಯವರಿಗೆ ಹಾಗೂ ಒಣಕಸ ನಿರ್ವಹಣೆಯನ್ನು ಸಂಜೀವಿನಿ ಒಕ್ಕೂಟಕ್ಕೆ ನೀಡಲಾಗಿದೆ. ಆದರೆ, ಸಂಗ್ರಹಗಾರರು ಕಸವನ್ನು ವಿಂಗಡಿಸದೆ ಕುರ್ನಾಡು ಸರ್ಕಾರಿ ಪದವಿ ಕಾಲೇಜು ಸನಿಹದಲ್ಲೇ ರಸ್ತೆ ಬದಿ ರಾಶಿ ಹಾಕುತ್ತಿದ್ದಾರೆ. ಈ ಕಸದ ರಾಶಿಯಲ್ಲಿ ನಾಯಿಗಳು ಹೊರಳಾಡಿ, ಪ್ಲಾಸ್ಟಿಕ್ ಚೀಲಗಳನ್ನು ಎಳೆದಾಡಿ ರಸ್ತೆಯಲ್ಲೆಲ್ಲ ಹರಡುತ್ತಿವೆ. ಜೋರು ಗಾಳಿ ಬಂದಾಗ ಪ್ಲಾಸ್ಟಿಕ್ ಚೀಲಗಳು ಮತ್ತು ಹಗುರವಾದ ಕಸದ ವಸ್ತುಗಳು ರಸ್ತೆಯಾದ್ಯಂತ ಹರಡಿ ವಾಹನ ಸವಾರರಿಗೂ ತೊಂದರೆ ನೀಡುತ್ತಿವೆ.
ಗುತ್ತಿಗೆ ಸಂಸ್ಥೆಯ ವಿಳಂಬ ಧೋರಣೆ
ಒಣಕಸ ನಿರ್ವಹಣೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. ಕಸ ಸಂಗ್ರಹಕಾರರು ‘ಜಾಗವಿಲ್ಲ’ ಎಂಬ ನೆಪವೊಡ್ಡಿ ಸಾರ್ವಜನಿಕ ಸ್ಥಳಗಳಲ್ಲೇ ತ್ಯಾಜ್ಯ ಸುರಿಯುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಘಟಕ ತೆರವುಗೊಳಿಸಿದ ನಂತರ ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ಪಂಚಾಯಿತಿ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಸ್ಥಳೀಯರ ದೂರಿನ ಮೇರೆಗೆ ಹಳೆಯ ಘಟಕವನ್ನು ತೆರವುಗೊಳಿಸಲಾಗಿದೆ. ನೂತನ ಘಟಕಕ್ಕಾಗಿ ಈಗಾಗಲೇ 2-3 ಕಡೆ ಜಮೀನು ಗುರುತಿಸಲಾಗಿದ್ದು, ಸದ್ಯಕ್ಕೆ ಹಸಿಕಸ ವಿಲೇವಾರಿಗೆ ಖಾಸಗಿ ಗುತ್ತಿಗೆ ನೀಡಲಾಗಿದೆ.
ಕಸ ಸಂಗ್ರಹಗಾರರು ಎರಡು ದಿನ ರಜೆಯಲ್ಲಿದ್ದ ಕಾರಣ ಕಸದ ರಾಶಿ ಬಿದ್ದಿದೆ. ಈಗಾಗಲೇ ಗ್ರಾಪಂ ಬಳಿ ತಾತ್ಕಾಲಿಕ ಶೆಡ್ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಕಸ ಸಂಗ್ರಹವಾದ ತಕ್ಷಣ ಅಲ್ಲಿಂದಲೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು.