ಉಡುಪಿಯ ಅಂಗಡಿ ಮುಂಗಟ್ಟುಗಳಲ್ಲಿ ರಾತ್ರಿ ವೇಳೆ ಮದ್ಯ ಕುಡಿದು ಖಾಲಿ ಬಾಟಲಿ ಇಟ್ಟು ಹೋಗುವ ಕುಡುಕರು. 
ಉಡುಪಿ

ಮದ್ಯದ ಖಾಲಿ ಬಾಟಲಿ; ಚರಂಡಿ-ರಸ್ತೇಲಿ!

* ಉಡುಪಿ ನಗರದಲ್ಲಿ ಕುಡುಕರ ಕರಾ'ಮತ್ತು'

* ಶುಭ್ರ ಪರಿಸರಕ್ಕೂ ತಂದಿದೆ ಆಪತ್ತು

ಪ್ರಶಾಂತ ಭಾಗ್ವತ ಉಡುಪಿ
ಆರೋಗ್ಯ, ಶಿಕ್ಷಣ ಕ್ಷೇತ್ರದ ಸಾಧನೆ ಮೂಲಕ ನಿರಂತರ ದೇಶದ ಗಮನ ಸೆಳೆಯುವ ಉಡುಪಿ, 'ಸ್ವಚ್ಛ ನಗರ' ಎಂಬ ಹೆಗ್ಗಳಿಕೆಯನ್ನೂ ಪಡೆದಿತ್ತು. ಆದರೆ, ಕೆಲ ವರ್ಷದಿಂದ ನಗರದ ಯಾವುದೇ ವಾರ್ಡ್​ಗೆ ಹೋದರೂ ಅಲ್ಲಿನ ರಸ್ತೆಯ ಅಕ್ಕಪಕ್ಕದಲ್ಲಿ ಜನರೇ ಎಸೆಯುವ ಕಸದ ರಾಶಿ ಗೋಚರಿಸುತ್ತಿದ್ದು, ಹೆಗ್ಗಳಿಕೆಗೆ ಮಸಿ ಬಳಿಯುತ್ತಿದೆ.
ಇತ್ತೀಚೆಗೆ ನಗರದ ಪ್ರಮುಖ ರಸ್ತೆಯ ಬದಿಗಳಲ್ಲಿ, ಕಟ್ಟಡಗಳ ಮಧ್ಯೆ ಇರುವ ಸಣ್ಣಸಣ್ಣ ಸಂದುಗಳಲ್ಲಿ, ಮಳೆ ನೀರು ಹರಿಯುವ ಚರಂಡಿಗಳಲ್ಲಿ, ನದಿ-ಕೆರೆಯ ದಡಗಳಲ್ಲಿ ಸಾರಾಯಿ ಬಾಟಲಿಗಳು ದರ್ಬಾರ್​ ನಡೆಸುತ್ತಿವೆ. ಕುಡಿದು ಎಸೆದ ಖಾಲಿ ಬಾಟಲಿಗಳು ಪರಿಸರದ ಅಂದ ಹಾಳು ಮಾಡುತ್ತಿದ್ದು, ಮಾಲಿನ್ಯಕ್ಕೂ ಕಾರಣವಾಗಿದೆ.
ಕಟ್ಟಡದ ಸಂದಿಗಳಲ್ಲಿ ಎಸೆದಿರುವ ಮದ್ಯದ ಖಾಲಿ ಟೆಟ್ರಾ ಪ್ಯಾಕೆಟ್​ಗಳು.

ಕುಡುಕರ ಕೃತ್ಯ

ಬಾರ್​ಗಳಿಂದ ಮದ್ಯವಿರುವ ಬಾಟಲಿ, ಟೆಟ್ರಾ ಪ್ಯಾಕ್​ ಖರೀದಿಸಿ ಬರುವ ಹಲವು ಕುಡುಕರು ನಗರದ ಕಟ್ಟಡಗಳ ಸಂದಿಯಲ್ಲಿ ಅಥವಾ ಮರೆಯಲ್ಲಿ ನಿಂತು ಕುಡಿದು ಬಳಿಕ ಖಾಲಿ ಬಾಟಲಿಯನ್ನು ಅಲ್ಲಿಯೇ ಎಸೆದು ಹೋಗುತ್ತಾರೆ. ಇನ್ನೂ ಅನೇಕ ಕುಡುಕರು ಬಾರ್​ ಸಮೀಪದ ಪಾನ್​ ಅಂಗಡಿಗಳಲ್ಲಿ ಪ್ಲಾಸ್ಟಿಕ್​ ಗ್ಲಾಸ್​, ನೀರಿನ ಬಾಟಲಿ ಅಥವಾ ಸೋಡಾ ಖರೀದಿಸಿ ತಂದು ಮದ್ಯಕ್ಕೆ ಮಿಕ್ಸ್​ ಮಾಡಿ ಕುಡಿದು ಚರಂಡಿಯಲ್ಲಿ ಖಾಲಿ ಬಾಟಲಿ ಎಸೆದು ಹೋಗುತ್ತಾರೆ. ಸಂಜೆಯಾಗುತ್ತಿದ್ದಂತೆ ಕುಡುಕರ ಈ ಕೃತ್ಯ ಆರಂಭಗೊಳ್ಳುತ್ತದೆ.

ಸಂಪರ್ಕ ರಸ್ತೆಯ ದುರುಪಯೋಗ

ನಗರದ ಮುಖ್ಯ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ ಅಥವಾ ನಗರದ ಇನ್ನೊಂದು ಪ್ರಮುಖ ರಸ್ತೆ ಸಂಪರ್ಕಿಸುವ ಮಾರ್ಗಗಳಲ್ಲಿ ಮದ್ಯದ ಬಾಟಲಿ ಎಸೆಯುವುದು ಇತ್ತೀಚೆಗೆ ಹೆಚ್ಚುತ್ತಿದೆ. ಮಣಿಪಾಲ ಭಾಗದಲ್ಲಿರುವ ಅನ್ಯರು ತಮ್ಮ ಅಪಾರ್ಟ್​ಮೆಂಟ್​ ಅಥವಾ ಮನೆಗಳಲ್ಲಿ 'ಎಣ್ಣೆ ಪಾರ್ಟಿ' ನಡೆಸಿ ಖಾಲಿ ಬಾಟಲಿಯನ್ನು ಸಂಪರ್ಕ ರಸ್ತೆಗಳಲ್ಲಿ ಎಸೆದುಹೋಗುತ್ತಿದ್ದಾರೆ. ಸಗ್ರಿ ರಸ್ತೆಯಿಂದ ಪೆರಂಪಳ್ಳಿ ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ಆಗಾಗ ಬಾಕ್ಸ್​ಗಟ್ಟಲೆ ಖಾಲಿ ಬಾಟಲಿ ಬಿದ್ದಿರುತ್ತವೆ.   
ಸಗ್ರಿ-ಪೆರಂಪಳ್ಳಿ ಸಂಪರ್ಕ ರಸ್ತೆಯಲ್ಲಿ ಎಸೆದಿರುವ ಖಾಲಿ ಬಾಟಲಿಗಳು.

ಕಾಲೇಜ್​ ವಿದ್ಯಾರ್ಥಿಗಳಿಂದಲೂ ಪರಿಸರ ನಾಶ!

ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳೂ ಸಹ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಉನ್ನತ ಶಿಕ್ಷಣಕ್ಕಾಗಿ ಉಡುಪಿ ಹಾಗೂ ಮಣಿಪಾಲದ ಭಾಗದಲ್ಲಿ ನೆಲೆಸಿರುವ ಅನ್ಯ ರಾಜ್ಯಗಳ ಕೆಲ ಯುವಕ-ಯುವತಿಯರು ರಸ್ತೆಯ ಪಕ್ಕದಲ್ಲೇ ಮದ್ಯ ಕುಡಿದು ಖಾಲಿ ಬಾಟಲಿಯನ್ನು ಅಲ್ಲೇ ಎಸೆಯುವ ದೃಶ್ಯವೂ ಕಾಣಸಿಗುತ್ತಿದೆ. ಕೊಳಲಗಿರಿ-ಶೀಂಬ್ರ ಸಂಪರ್ಕ ರಸ್ತೆಯ ಮಧ್ಯೆ ಇರುವ ಸೇತುವೆ ಕಳೆದ ಹಲವು ವರ್ಷದಿಂದ ವಿದ್ಯಾರ್ಥಿಗಳಿಗೆ 'ಮದ್ಯ-ಬೀಯರ್​ ಕುಡಿಯುವ ಅಡ್ಡೆ' ಆಗಿದೆ. ಪ್ರತಿದಿನವೂ ಸಂಜೆಯಾಗುತ್ತಿದ್ದಂತೆ ಕಾರು-ಬೈಕ್​ಗಳಲ್ಲಿ ಬರುವ ಯುವಕ-ಯುವತಿಯರು, ಒಂದೇ ಸಿಗರೇಟ್​ಅನ್ನು ನಾಲ್ಕಾರು ಮಂದಿ ಸೇದುತ್ತ, ಡ್ರಿಂಕ್ಸ್​ ಮಾಡುವ ದೃಶ್ಯ ಸಾಮಾನ್ಯ ಎಂಬಂತಾಗಿದೆ. ಬಳಿಕ ಸೇತುವೆಯ ಬಳಿಯಲ್ಲೇ ಮದ್ಯದ ಖಾಲಿ ಬಾಟಲಿ ಎಸೆದು ತೆರಳುತ್ತಾರೆ.

ಬಾರ್​ಗಳ 'ಕಸ'ಕ್ಕೆ ಯಾರು ಹೊಣೆ?

ಮನೆಗಳ ಹಸಿ-ಒಣ ತ್ಯಾಜ್ಯವನ್ನು ರಸ್ತೆಯ ಮೇಲೆ ಎಸೆಯುವ ಕೆಲವರನ್ನು ಹಿಡಿದು ನಗರಸಭೆಯ ಅಧಿಕಾರಿಗಳು ದಂಡ ವಿಧಿಸುತ್ತಾರೆ. ಆದರೂ ಕಸ ಎಸೆಯುವವರು ಕಡಿಮೆ ಆಗುತ್ತಿಲ್ಲ. ಇದೀಗ ಮದ್ಯದ ಬಾಟಲಿ ಹಾಗೂ ಟೆಟ್ರಾ ಪ್ಯಾಕ್​, ನೀರಿನ ಬಾಟಲಿಯನ್ನು ರಸ್ತೆ, ಚರಂಡಿಯಲ್ಲಿ ಎಸೆಯುತ್ತಿದ್ದಾರೆ. ಇದಕ್ಕೆ ಯಾರು ಹೊಣೆ? ಕುಡುಕರಿಗೆ ಎಣ್ಣೆ ಪೂರೈಸುವ ಕಂಪನಿಗಳಿಗೆ, ಬಾರ್​-ರೆಸ್ಟೋರೆಂಟ್​ನವರಿಗೆ ಜವಾಬ್ದಾರಿ ಇಲ್ಲವೇ? ಯಾವುದೇ ಬಾರ್​ ಸಮೀಪದಲ್ಲಿ ಮದ್ಯದ ಖಾಲಿ ಬಾಟಲಿ ಬಿದ್ದಿದ್ದರೆ ಅವರಿಗೂ ದಂಡ ವಿಧಿಸಬೇಕು ಎನ್ನುತ್ತಾರೆ ಉಡುಪಿಯ ಪ್ರಾಜ್ಞರು.
"

ಮಲ್ಪೆ ಬಸ್​ ನಿಲ್ದಾಣದಿಂದ ಮಣಿಪಾಲ, ಪರ್ಕಳದವರೆಗೂ ರಸ್ತೆ, ಬೀದಿ ಬದಿಯಲ್ಲಿರುವ ಕಸವನ್ನು ನಿತ್ಯ 65 ಸಿಬ್ಬಂದಿ ಸ್ವಚ್ಛ ಮಾಡುತ್ತಾರೆ. ಮದ್ಯದ ಬಾಟಲಿಯನ್ನೂ ಇತ್ತೀಚೆಗೆ ರಸ್ತೆ, ಚರಂಡಿಗಳಲ್ಲಿ ಎಸೆಯುತ್ತಿರುವುದು ಗಮನಕ್ಕೆ ಬಂದಿದೆ. ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರದಲ್ಲಿರುವ ಬಾರ್​ಗಳ ಮಾಲೀಕರಿಗೆ ನೋಟಿಸ್​ ನೀಡಿ, ಅವರ ಗ್ರಾಹಕರಿಗೆ ಖಾಲಿ ಬಾಟಲಿ ಎಲ್ಲೆಂದರಲ್ಲಿ ಎಸೆಯದಂತೆ ಮನವರಿಕೆ ಮಾಡುವಂತೆ ಸೂಚಿಸಲಾಗುವುದು.

— ಮಹಾಂತೇಶ್​ ಹಂಗರಗಿ. ಉಡುಪಿ ನಗರಸಭಾ ಪೌರಾಯುಕ್ತ.