ಉಡುಪಿಯ ಕಲ್ಸಂಕ ವೃತ್ತದಲ್ಲಿ ಕಾಲಿಗೆ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಹುಚ್ಚಾಟ ನಡೆಸಿದ ವ್ಯಕ್ತಿ. 
ಉಡುಪಿ

ಬೆಂಕಿ ಹಚ್ಚಿಕೊಂಡು ವ್ಯಕ್ತಿಯ ಹುಚ್ಚಾಟ

* ಉಡುಪಿ ಕಲ್ಸಂಕ ವೃತ್ತದಲ್ಲಿ ಟನೆ

ಉಡುಪಿ: ವಾಹನ ದಟ್ಟಣೆ ಇರುವ ಕಲ್ಸಂಕ ವೃತ್ತದ ಬಳಿ ಕಾಲಿಗೆ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಹುಚ್ಚಾಟ ನಡೆಸಿದ ವ್ಯಕ್ತಿಯನ್ನು ನಗರ ಠಾಣೆಯ ಪೊಲೀಸರು ಹಾಗೂ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿದ್ದಾರೆ.
ರವಿವಾರ (ಫೆ.22) ಸಂಜೆ ಕಲ್ಸಂಕ ವೃತ್ತಕ್ಕೆ ಪೆಟ್ರೋಲ್​ ತುಂಬಿದ್ದ ಬಾಟಲಿಯೊಂದಿಗೆ ಬಂದಿದ್ದ ವ್ಯಕ್ತಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರಂಪಾಟ ನಡೆಸಿದ್ದ. ಈ ವೇಳೆ ಕರ್ತವ್ಯದಲ್ಲಿದ್ದ ಟ್ರಾಫಿಕ್​ ಪೊಲೀಸರು ಆತನ ಕೈಯಲ್ಲಿದ್ದ ಪೆಟ್ರೋಲ್​ ಬಾಟಲಿ ಕಸಿದುಕೊಂಡು ನಗರ ಠಾಣೆಗೆ ಮಾಹಿತಿ ನೀಡಿದ್ದರು. 
ಬಳಿಕ ಆ ವ್ಯಕ್ತಿ ಮತ್ತೆ ಪೆಟ್ರೋಲ್​ ತುಂಬಿದ ಬಾಟಲಿಯೊಂದಿಗೆ ಕಲ್ಸಂಕ ವೃತ್ತಕ್ಕೆ ಬಂದು ಸಾಯುವುದಾಗಿ ಬೊಬ್ಬೆ ಹೊಡೆದನು. ಈ ವೇಳೆ ಓರ್ವ ಮಹಿಳೆಯೂ ಇದ್ದು ಆತನನ್ನು ತಪ್ಪಿಸಲು ಯತ್ನಿಸುತ್ತಿದ್ದಳು. ಆದರೆ, ಆಕೆಗೆ ತನ್ನ ಹತ್ತಿರ ಬರದಂತೆ ಕೂಗುತ್ತಿದ್ದನು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಸ್ಥಳಕ್ಕಾಗಮಿಸಿ ಆತನನ್ನು ನಿಯಂತ್ರಿಸಲು ಯತ್ನಿಸಿದರು. ಆದರೆ, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಆತ, ನಿಮಗೂ ಪೆಟ್ರೋಲ್​ ಎರಚಿ ಬೆಂಕಿ ಹಾಕುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು. ಬಳಿಕ ತನ್ನ ಬಲಕಾಲಿಗೆ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಕೂಡಲೇ ಆತನನ್ನು ಸುತ್ತುವರಿದು ಬೆಂಕಿ ನಂದಿಸಲಾಯಿತು.
ಎಸ್​ಐ ನಾರಾಯಣ, ಎಸ್​ಐ ಗಂಗಪ್ಪ ಅವರು ಸ್ಥಳಕ್ಕೆ ಬಂದು ವ್ಯಕ್ತಿಯನ್ನು ವಶಕ್ಕೆ ಪಡೆದರು. ಎಷ್ಟೇ ಪ್ರಯತ್ನಿಸದರೂ ಆತ ಹೆಸರು ಹೇಳುತ್ತಿರಲಿಲ್ಲ. ಆತ ಗದಗ ಊರಿನವನೆಂದು ತಿಳಿದು ಬಂದಿದ್ದರಿಂದ ಆತನ ಮನವೊಲಿಸಿ, ಗದಗಕ್ಕೆ ರವಾನಿಸುವ ವ್ಯವಸ್ಥೆ ಮಾಡಲಾಯಿತು. ಈ ಘಟನೆ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ಎಸ್​ಐ ಗಂಗಪ್ಪ ಮಾಹಿತಿ ನೀಡಿದ್ದಾರೆ.