ಬಂಧನಕ್ಕೊಳಕ್ಕಾದ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಯುವಕ ಸೈಯ್ಯದ್ ಮೊಹಮ್ಮದ್ ಮೆಹರಾಜ್.
* ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಕೆ
* 1.52 ಲಕ್ಷ ರೂ. ಮೊತ್ತದ ಸೊತ್ತು ವಶ
ಉಡುಪಿ: ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದು, ಒಟ್ಟು 1.52 ಲಕ್ಷ ರೂ. ಮೊತ್ತದ ಸೊತ್ತು ವಶಪಡಿಸಿಕೊಂಡಿದ್ದಾರೆ.
ಬ್ರಹ್ಮಾವರ ತಾಲೂಕಿನ ಆಕಾಶವಾಣಿ ಸಮೀಪದ ರೆಸಿಡೆನ್ಸಿ ನಿವಾಸಿ, ಶಿರೂರು ಜೆ.ಎಂ. ಕ್ರಾಸ್ ರಸ್ತೆ ಮಾರ್ಗದ ಮುಸ್ಲಿ ಮೊಹಲ್ಲಾದ ಖಾಯಂ ನಿವಾಸಿ ಸೈಯ್ಯದ್ ಮೊಹಮ್ಮದ್ ಮೆಹರಾಜ್ (19) ಬಂಧಿತ ಆರೋಪಿ.
ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆಯ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಕಾಪು, ಬ್ರಹ್ಮಾವರ, ಉಡುಪಿ, ಮಣಿಪಾಲದಲ್ಲಿರುವ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದನು. ಈ ವೇಳೆ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು., ಮಲ್ಪೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ನೇತೃತ್ವದಲ್ಲಿ ಮಲ್ಪೆ ಠಾಣೆ ಪೊಲೀಸರು ಯುವಕನ್ನು ಬಂಧಿಸಿದರು.
ಆರೋಪಿಯ ಬಳಿಯಿದ್ದ 1.03 ಮಿಲಿ ಗ್ರಾಂ ತೂಕದ ಎಂಡಿಎಂಎ, ಸಾಗಾಟಕ್ಕೆ ಬಳಸಿದ 1 ಬೈಕ್ ಹಾಗೂ ಇನ್ನಿತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.