ಕಾಸರಗೋಡು: ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವವರು ಹಾಗೂ ಮಾದಕ ವಸ್ತು ಜಾಲಗಳ ವಿರುದ್ಧ ಪೊಲೀಸರು ನಡೆಸುತ್ತಿರುವ ಕಾರ್ಯಚರಣೆಯಯಲ್ಲಿ 14 ಪ್ರಮುಖ ಗಡಿಪ್ರದೇಶಗಳಲ್ಲಿ ಶನಿವಾರ ಏಕಕಾಲಕ್ಕೆ 1,962 ವಾಹನಗಳ ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ ಇತರ ರಾಜ್ಯಗಳಿಂದ ಆಗಮಿಸಿದ್ದ 336 ವಾಹನಗಳು ಒಳಗೊಂಡಿವೆ. ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇರಿಸಲು 49 ಸಂಚಾರಿ ಗಸ್ತು ತಂಡವನ್ನು ಜಿಲ್ಲಾ ಪೊಲೀಸ್ ನಿಯೋಜಿಸಿದೆ.
ವಿವಿಧ ಪ್ರಕರಣಗಳಲ್ಲಿ ವಾರಂಟ್ ಆರೋಪಿಗಳಾಗಿರುವ ಏಳು ಮಂದಿ ಹಾಗೂ ಜಾಮೀನು ರಹಿತ ವಾರಂಟ್ ಅನ್ವಯ ಐವತ್ತು ಮಂದಿಯನ್ನು ಬಂಧಿಸಲಾಗಿದೆ. ಮಾದಕ ದ್ರವ್ಯ ಮತ್ತು ಕುಡಿದು ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮದನ್ವಯ ಒಟ್ಟು 12 ಪ್ರಕರಣಗಳು ದಾಖಲಾಗಿವೆ. ಚಂದೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐದು ಪ್ರಕರಣ ದಾಖಲಾಗಿದೆ. ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ 42 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅನುಮಾನಾಸ್ಪದ ರೀತಿಯಲ್ಲಿ ಕಂಡು ಬಂದ 80 ಜನರ ವಿರುದ್ಧ ಮತ್ತು ಕಾನೂನು ಉಲ್ಲಂಘನೆಗಳಿಗಾಗಿ 46 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕುಂಬಳೆ ಠಾಣೆ ಪೊಲೀಸರ ಕೂಂಬಿಂಗ್ ಕಾರ್ಯಾಚರಣೆಯಲ್ಲಿ, ಕುಂಬಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಅಜನೂರು ತೆಕ್ಕೆಪ್ಪುರಂ ಮೂಲದ ಸಮೀರ್ ಟಿ.ಎಂ. (39)ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.