ಉಡುಪಿ: ದುಷ್ಪರಿಣಾಮಗಳ ಅರಿವಿಲ್ಲದೆ ಯುವಜನರು ಮಾದಕ ವ್ಯಸನದ ಸುಳಿಗೆ ಸಿಲುಕುತ್ತಿರುವುದು ಆತಂಕಕಾರಿ ಸಂಗತಿ. ಈ ವ್ಯಸನವೇ ಕಾಯಿಲೆ ಎಂದು ತಿಳಿಯುವ ವೇಳೆಗೆ ಅನೇಕರು ತಮ್ಮ ಯೌವನ ಕಳೆದುಕೊಂಡಿರುತ್ತಾರೆ. ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಅಲ್ಲದೆ, ಜೀವನದ ನಿಯಂತ್ರಣವನ್ನೇ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ರಾಜೀವ್ ಗಾಂಧಿ ಎಜುಕೇಶನ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ (ರಿ.)ನ ಸ್ಪಂದನ ಡಿಅಡಿಕ್ಷನ್ ಸೆಂಟರ್ನ ಆಪ್ತ ಸಮಾಲೋಚಕ ಅಭಿಷೇಕ ತಿಳಿಸಿದರು.
ಉಡುಪಿ ಅಜ್ಜರಕಾಡಿನಲ್ಲಿರುವ ಡಾ. ಜಿ.ಶಂಕರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮೈ ಭಾರತ್ ಉಡುಪಿ ವತಿಯಿಂದ ಗುರುವಾರ (ನ.5) ಆಯೋಜಿಸಿದ್ದ 'ನಶಾಮುಕ್ತ ಯುವ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಪಂದನ ಡಿಅಡಿಕ್ಷನ್ ಸೆಂಟರ್ನ ಯೋಜನಾ ನಿರ್ದೇಶಕಿ ನಿಶಾ ಶೆಟ್ಟಿ ಮಾತನಾಡಿ, ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
ಮೈ ಭಾರತ್ ಉಡುಪಿಯ ನಿರ್ವಾಹಕಿ ಶ್ಯಾಮಲಾ ಮಾದಕ ದ್ರವ್ಯ ವಿರೋಧಿ ಭಾರತ ನಿರ್ಮಾಣದ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜ್ನ ಮಾದಕ ದ್ರವ್ಯ ವಿರೋಧಿ ಸಮಿತಿಯ ಸಂಚಾಲಕ ಡಾ. ರವೀಶ್ ಬಿ. ಸ್ವಾಗತಿಸಿದರು. ಮೈ ಭಾರತ್ನ ಜಿಲ್ಲಾ ನೋಡಲ್ ಅಧಿಕಾರಿ ಡಾ. ಸಫಿಯಾ, ಶೈಕ್ಷಣಿಕ ಸಂಯೋಜಕರಾದ ಉಮಾಶ್ರೀ ಹಾಗೂ ಸುನೀತಾ ಉಪಸ್ಥಿತರಿದ್ದರು.
ವೈಷ್ಣವಿ ಪಡಿಯಾರ್ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಕೃತಿ ಕಾರ್ಯಕ್ರಮ ನಿರೂಪಿಸಿದರು. ಸಿಂಧು ಭಟ್ ವಂದಿಸಿದರು.
ಅನೇಕ ಕೌಟುಂಬಿಕ ಸಮಸ್ಯೆಗಳ ಮೂಲ ಮದ್ಯಪಾನ ಮತ್ತು ಮಾದಕ ದ್ರವ್ಯ ವ್ಯಸನವಾಗಿದೆ. ಇದು ವ್ಯಕ್ತಿಯ ಬದುಕನ್ನಷ್ಟೇ ಅಲ್ಲದೆ, ಇಡೀ ಕುಟುಂಬದ ನೆಮ್ಮದಿ ಹಾಳುಮಾಡುತ್ತದೆ. ಯುವಜನತೆ ಎಚ್ಚೆತ್ತುಕೊಂಡು ದುಶ್ಚಟಗಳಿಂದ ದೂರವಿರಬೇಕು. ಜಾಗೃತರಾಗಿ ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು.ಪ್ರೊ. ಡಾ.ನಿಕೇತನಾ. ಕಾಲೇಜ್ನ ಪ್ರಾಂಶುಪಾಲೆ.