ಉಡುಪಿಯಲ್ಲಿ ಆಯೋಜಿಸಿದ್ದ ರಂಗಹಬ್ಬದಲ್ಲಿ ಕೃಷ್ಣ ವಿ. ಸುವರ್ಣ ಅವರಿಗೆ 'ರಂಗಸಾಧಕ' ಪ್ರಶಸ್ತಿ ನೀಡಲಾಯಿತು. ಡಾ. ಸುನೀತಾ ವಿ., ಯು. ಮೋಹನ್ ಉಪಾಧ್ಯಾಯ, ಆನಂದ್ ಪಿ. ಸುವರ್ಣ, ಸದಾನಂದ ಸಾಲ್ಯಾನ್, ಸುರೇಶ್ ಬಿ. ಕರ್ಕೇರ, ರತ್ನಾಕರ್ ಅಮೀನ್, ಮನೋಜಕುಮಾರ್, ಪ್ರಕಾಶ್ ಕೊಡವೂರು ಎಂ.ಎಸ್. ಭಟ್ ಇದ್ದರು.
* ಪ್ರಾಧ್ಯಾಪಕಿ ಡಾ. ಸುನೀತಾ ವಿ. ಅಭಿಪ್ರಾಯ
* ಸುಮನಸಾ ನಾಟಕೋತ್ಸವಗಳ ರಂಗಹಬ್ಬ
ಉಡುಪಿ: ಇಂದಿನ ಸಿನಿಮಾಗಳು ಯಾವ ಸಂದೇಶ ಸಾರುತ್ತಿರುವುದು ಕಾಣುತ್ತಿಲ್ಲ. ರೌಡಿಸಂ, ಹೊಡೆದಾಟಗಳೇ ಕಾಣುತ್ತವೆ. ಆದರೆ, ನಾಟಕಗಳು ಇಂದಿಗೂ ಸಹ ಸಮಾಜದಲ್ಲಿರುವ ಸಮಸ್ಯೆ, ಪಿಡುಗುಗಳನ್ನು ಪ್ರತಿಬಿಂಬಿಸುತ್ತ ಚಿಂತನೆ ಮೂಡಿಸುತ್ತವೆ. ನಾಟಕ ಸೇರಿದಂತೆ ರಂಗಭೂಮಿಯು ಸಮಾಜದ ಪ್ರತಿಬಿಂಬ. ಎಲ್ಲ ಆಗು-ಹೋಗುಗಳಿಗೆ ಹಿಡಿವ ಕನ್ನಡಿಯಾಗಿದೆ ಎಂದು ಕೋಟದ ಲಕ್ಷ್ಮೀ ಸೋಮಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಸುನೀತಾ ವಿ. ಅಭಿಪ್ರಾಯಪಟ್ಟರು.
ಉಡುಪಿಯ ಅಜ್ಜರಕಾಡಿನಲ್ಲಿರುವ ಭುಜಂಗ ಪಾರ್ಕ್ನ ಬಯಲು ರಂಗಮಂದಿರದಲ್ಲಿ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬ-14ರ ಎರಡನೇ ದಿನವಾದ ಸೋಮವಾರ (ಫೆ.23) ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆನರಾ ಕ್ರೆಡಿಟ್ ಕೋ&ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಯು. ಮೋಹನ್ ಉಪಾಧ್ಯಾಯ ಮಾತನಾಡಿ, ರಂಗಭೂಮಿಯ ಮೂಲ ಭೂಮಿಕೆ ಬಿಡದೆ ಕಾಲಕ್ಕೆ ತಕ್ಕಂತೆ ನಾಟಕಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ರಂಗಕರ್ಮಿ ಕೃಷ್ಣ ವಿ. ಸುವರ್ಣ ಮಲ್ಪೆ ಅವರಿಗೆ 'ರಂಗಸಾಧಕ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉದ್ಯಮಿಗಳಾದ ಆನಂದ್ ಪಿ. ಸುವರ್ಣ, ಸದಾನಂದ ಸಾಲ್ಯಾನ್ ಮಲ್ಪೆ, ಮಹಾಲಕ್ಷ್ಮೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕ ಸುರೇಶ್ ಬಿ. ಕರ್ಕೇರ, ಮಲ್ಪೆಯ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ರತ್ನಾಕರ್ ಅಮೀನ್, ತಾಂಗದಗಡಿ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಮನೋಜಕುಮಾರ್, ಸುಮನಸಾ ಕೊಡವೂರು ಸಾಂಸತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು.
ಸಂಘಟನೆಯ ಗೌರವಾಧ್ಯಕ್ಷ ಎಂ.ಎಸ್. ಭಟ್ ಸ್ವಾಗತಿಸಿದರು. ನಿರ್ದೇಶಕ ದಿವಾಕರ ಕಟೀಲ್ ವಂದಿಸಿದರು. ಅಕ್ಷತ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಬಾಲಕೃಷ್ಣ ಶಿಬಾರ್ಲ ರಚನೆ, ವಿದ್ದು ಉಚ್ಚಿಲ ನಿರ್ದೇಶನದಲ್ಲಿ ಉಡುಪಿಯ ಸುಮನಸಾ ಕೊಡವೂರು ತಂಡದ ಕಲಾವಿದರು 'ಯೇಸ' ತುಳು ನಾಟಕ ಪ್ರದರ್ಶಿಸಿದರು.
ಸಿನಿಮಾ ನಟರಿಗೆ ಅನೇಕ ರೀಟೇಕ್ಗೆ ಅವಕಾಶವಿದೆ. ಆದರೆ, ರಂಗಭೂಮಿಯ ಕಲಾವಿದರಿಗೆ ತಪ್ಪಾದರೆ ರೀಟೇಕ್ ಇಲ್ಲ. ಎಲ್ಲ ತಯಾರಿ ಮಾಡಿಕೊಂಡು ಪ್ರದರ್ಶಿಸಬೇಕಿದೆ. ಹಾಗಾಗಿ ಶ್ರೇಷ್ಠ ನಟರು ರಂಗಭೂಮಿಯಿಂದ ಹೊರಹೊಮ್ಮುತ್ತಾರೆ. ಸಾಮಾಜಿಕ ಜಾಲತಾಣ, ಸಿನಿಮೀಯ ಜಗತ್ತಿನಲ್ಲಿ ಪೀಳಿಗೆ ಎತ್ತ ಸಾಗುತ್ತಿದೆ ಎಂಬ ಆತಂಕ ಕಾಡುತ್ತಿರುವಾಗ ರಂಗಚಟುವಟಿಕೆ ಮೂಲಕ ಯುವಸಮುದಾಯವನ್ನು ಸುಮನಸಾ ಸರಿಯಾದ ದಿಕ್ಕಿನಲ್ಲಿ ಒಯ್ಯುತ್ತಿದೆ.