ಕಾಮಗಾರಿಗಾಗಿ ಚರಂಡಿಯ ಸ್ಲ್ಯಾಬ್ ಒಡೆಯಲಾಗಿದೆ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಡೆದ ಒಳಚರಂಡಿ ಸ್ಲ್ಯಾಬ್ ಮೇಲೆ ಈಚರ್ ವಾಹನ ಹತ್ತುತ್ತಿದ್ದಂತೆಯೇ ಒಡೆದು ಹೋಗಿದ್ದು ಇದರಿಂದಾಗಿ ನಾಲ್ಕೇ ತಿಂಗಳಲ್ಲಿ ಕಳಪೆ ಕಾಮಗಾರಿ ಬೆಳಕಿಗೆ ಬಂದಿದೆ. ಇದು ಉಳ್ಳಾಲ ದರ್ಗಾ ಸಮೀಪ ನಡೆದ ಕಾಮಗಾರಿಯ ಕಥೆ!
ಉಳ್ಳಾಲ ನಗರಸಭಾ ವ್ಯಾಪ್ತಿಯ ವಾರ್ಡ್ ನಂಬರ್ 10 ಮತ್ತು 11ರ ಗಡಿಬಾಗದಲ್ಲಿ ದರ್ಗಾ ಮುಂಭಾಗದಲ್ಲಿರುವ ಮುಹಿಯುದ್ದೀನ್ ಜುಮಾ ಮಸೀದಿಗೆ ತಾಗಿಕೊಂಡಿದ್ದ ಮುಖ್ಯರಸ್ತೆಯಲ್ಲಿ ಮಳೆನೀರು ಹೋಗುವ ಚರಂಡಿ ಕಳೆದ ಡಿಸೆಂಬರ್‌ನಲ್ಲಿ ನಿರ್ಮಿಸಲಾಗಿತ್ತು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ 2023-24ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಾಲೋನಿಗಳ ಸಮಗ್ರ ಅಭಿವೃದ್ಧಿ ಹಾಗೂ ಮೂಲಸೌಲಭ್ಯಗಳನ್ನು ಒದಗಿಸಲು 20 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿತ್ತು.
ಅದರಂತೆ ಉಳ್ಳಾಲ ಮಾಸ್ತಿಕಟ್ಟೆ ಮುಖ್ಯ ರಸ್ತೆಯಿಂದ ಭಗವತೀ ರಸ್ತೆ ಅಭಿವೃದ್ಧಿಗಾಗಿ 20 ಲಕ್ಷ ರೂ.ಅಂದಾಜಿಸಲಾಗಿತ್ತು. ಕೆಐಆರ್‌ಡಿಎಲ್ ಸಂಸ್ಥೆ ಕಾಮಗಾರಿ ವಹಿಸಿಕೊಂಡಿದ್ದು ಒಳಚರಂಡಿ ಕಾಮಗಾರಿಯನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಆರಂಭಿಸಿ ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯಗೊಳಿಸಲಾಗಿತ್ತು.
ಕಾಮಗಾರಿಯ ಗುಟ್ಟು ಇತ್ತೀಚೆಗೆ ರಟ್ಟಾಗಿದೆ. ಮೇ 7ರಂದು ಕೆಂಪುಕಲ್ಲು ತುಂಬಿಕೊಂಡು ಬಂದಿದ್ದ ಈಚರ್ ಲಾರಿಯ ಚಕ್ರ ಚರಂಡಿಯ ಸ್ಲ್ಯಾಬ್ ಮೇಲೆ ಹತ್ತಿದ ಕ್ಷಣವೇ ಸ್ಲ್ಯಾಬ್ ಕುಸಿದು ಈಚರ್ ಲಾರಿಯ ಎಡಬದಿಯ ಚಕ್ರಗಳು ಹೊಂಡದೊಳಗೆ ಬಿದ್ದು ಒಂದು ಭಾಗಕ್ಕೆ ಮಗುಚಿದೆ. ಇದರ ಪರಿಣಾಮ ಮುಹಿಯುದ್ದೀನ್ ಜುಮಾ ಮಸೀದಿಯ ಅವರಣ ಗೋಡೆಗೂ ಹಾನಿಯಾಗಿದೆ. ಮತ್ತೆ ಸ್ಲ್ಯಾಬ್ ನಿರ್ಮಿಸುವ ನಿಟ್ಟಿನಲ್ಲಿ ಒಡೆದು ಹಾಕಲಾಗಿದ್ದು ಈ ಸಂದರ್ಭ ಸ್ಲ್ಯಾಬ್‌ಗೆ ಕಬ್ಬಿಣದ ರಾಡ್ ಹಾಕದೆ ಅತ್ಯಂತ ಕಳಪೆಯಾಗಿ ನಿರ್ಮಿಸಿರುವುದು ಕಂಡು ಬಂದಿದ್ದು ಸ್ಥಳೀಯವಾಗಿ ಚರ್ಚಾ ವಿಷಯವಾಗಿದೆ.
ಕಳಪೆ ಕಾಮಗಾರಿ ಬಯಲಿಗೆ ಬರುತ್ತಲೇ ಸ್ಥಳೀಯ ನಿವಾಸಿ ಕಮಾಲುದ್ದೀನ್ ನಿಝಾಮ್ ಎಂಬುವರು ಉಳ್ಳಾಲ ಠಾಣೆ ಮತ್ತು ನಗರಸಭೆಗೆ ದೂರು ನೀಡಿದ್ದಾರೆ. ಹೊಸದಾಗಿ ನಿರ್ಮಿಸಿದ ಚರಂಡಿ ಕಳಪೆಯಾಗಿದ್ದು ಸರ್ಕಾರದ ಬೊಕ್ಕಸ ಲೂಟಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಿದ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಮೂಕದ್ದಮೆ ದಾಖಲಿಸಬೇಕು. ಮುಂದಕ್ಕೆ ಇವರಿಗೆ ಯಾವುದೇ ಕಾಮಗಾರಿಯ ಗುತ್ತಿಗೆ ನೀಡಬಾರದು ಹಾಗೂ ಇವರ ಪರವಾನಗಿ ರದ್ದುಗೊಳಿಸಬೇಕು. ಕುಸಿದು ಬಿದ್ದ ಲಾರಿಗೆ ನಗರಸಭೆಯಿಂದ ಪರಿಹಾರ ಹಾಗೂ ಮಸೀದಿಯ ಆವರಣಗೋಡೆ ಕೊಡಲೇ ದುರಸ್ತಿಗೊಳಿಸಬೇಕು. ಕಳಪೆ ಕಾಮಗಾರಿಗೆ ಗುತ್ತಿಗೆದಾರರೊಂದಿಗೆ ಕೈ ಜೋಡಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿ ಅವರ ವಿರುದ್ಧ ಕಠಿಣ ಕಾನೂನಾತ್ಮಕ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಕಾಮಗಾರಿ ಆರಂಭಿಸಿದ ಸಂದರ್ಭ ಸ್ಥಳದಲ್ಲಿ ಮಾಹಿತಿ ಫಲಕ ಅಳವಡಿಸಿ ರಾಜ ಗಾಂಭೀರ್ಯ ನೀಡಲಾಗಿತ್ತು. ಆದರೆ ಕಳಪೆ ಕಾಮಗಾರಿಯ ಅಸಲಿಯತ್ತು ಬಯಲಿಗೆ ಬರುತ್ತಲೇ ಮಾಹಿತಿ ಫಲಕವೂ ಮಾಯವಾಗಿದ್ದು ಅನುದಾನ, ಗುತ್ತಿಗೆ ಸಂಸ್ಥೆಯ ಹೆಸರು ಮರೆಮಾಚುವ ಪ್ರಯತ್ನ ಮಾಡಲಾಗಿದೆ.
ಸರ್ಕಾರದ ಅನುದಾನ ಸಮರ್ಪಕವಾಗಿ ಬಳಸಿ ಕಾಮಗಾರಿ ನಡೆಸುವ ಬದಲು ಒಳಗುತ್ತಿಗೆ ಪಡೆದು ಕಳಪೆ ಕಾಮಗಾರಿಯ ಮೂಲಕ ಹಣ ಪೋಲು ಮಾಡಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕರು ನಿರ್ಲಕ್ಷ್ಯ ತಾಳದೆ ಗಂಭೀರವಾಗಿ ಪರಿಗಣಿಸಬೇಕು. ಒಳಚರಂಡಿ ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸುವ ಜೊತೆ ಗುತ್ತಿಗೆ ಸಂಸ್ಥೆಯ ಪರವಾನಿಗೆ ರದ್ದುಪಡಿಸಬೇಕು.