ಮಣಿಪಾಲದ ರಾಜೀವ ನಗರದ ಕಾಲುವೆಯಲ್ಲಿ ಕಸ&ತ್ಯಾಜ್ಯಗಳೊಂದಿಗೆ ಶೌಚಗೃಹದ ಮಲೀನ ನೀರು ಹರಿಯುತ್ತಿರುವುದು.
* ಚರಂಡಿಯಲ್ಲಿ ಹರಿಯುತ್ತಿದೆ ಕೊಳಕು ನೀರು
* ಇಲ್ಲಿ ಕ್ರಮ ಕೈಗೊಳ್ಳುವವರು ಯಾರು?
ಉಡುಪಿ: ನಗರದ ಅನೇಕ ವಾರ್ಡ್ಗಳಲ್ಲಿ ಸಮರ್ಪಕವಾಗಿ ಡ್ರೈನೇಜ್ ವ್ಯವಸ್ಥೆ ಇಲ್ಲ. ಹೀಗಾಗಿ ಅನೇಕ ವಸತಿ ಸಮುಚ್ಚಯ, ಹೋಟೆಲ್ ಹಾಗೂ ಮನೆಗಳ ಶೌಚಗೃಹದ ಮಲೀನ ನೀರನ್ನು ಕಾಲುವೆಗಳಿಗೇ ಬಿಡಲಾಗುತ್ತಿದೆ.
ಮಳೆಗಾಲದ ಸಂದರ್ಭದಲ್ಲಿ ಮಳೆ ನೀರು ಹರಿದು ಸಮೀಪದ ನದಿ ಮೂಲಕ ಸಮುದ್ರ ಸೇರಲು ಮಾಡಿರುವ ಕಾಲುವೆಯ ವ್ಯವಸ್ಥೆ ದುರ್ಬಳಕೆ ಆಗತೊಡಗಿದೆ. ಅನೇಕರು ಪೈಪ್ ಮೂಲಕ ನೇರವಾಗಿಯೇ ಕಾಲುವೆಗಳಿಗೆ ತಮ್ಮ ಮನೆಯ ಕೊಳಕು ನೀರು ಬಿಡುತ್ತಿದ್ದಾರೆ.
ಪರಿಸರದಲ್ಲಿ ಗಬ್ಬು ವಾಸನೆ
ಮಣಿಪಾಲದಿಂದ ರಾಜೀವ ನಗರ ಸಂಪರ್ಕಿಸುವ ಮುಖ್ಯ ರಸ್ತೆಯ ಮಾರ್ಗದಲ್ಲಿರುವ ಪೊಲೀಸ್ ವಸತಿ ಗೃಹದ ಬಳಿ ಮಳೆ ನೀರು ಹರಿಯಲು ನಿರ್ಮಿಸಿದ ಕಾಲುವೆ ಇದೆ. ಇಲ್ಲಿ ಮಳೆಗಾಲದ ಹೊರತಾಗಿ ಬೇಸಿಗೆಯಲ್ಲೂ ಡ್ರೈನೇಜ್ ನೀರು ಹರಿಯುತ್ತಿದ್ದು, ಪರಿಸರ ಗಬ್ಬು ವಾಸನೆಯಿಂದ ಕೂಡಿದೆ. ಅಲ್ಲಿನ ಕಾಲವೆಯಲ್ಲಿ ಹರಿಯುತ್ತಿರುವ ಕೊಳಕು ನೀರು ನೋಡಿದರೆ ವಾಕರಿಕೆ ಬರುವಂತಿದೆ. ಈ ಭಾಗದಲ್ಲಿ ಸಂಚರಿಸುವವರು ಮೂಗುಮುಚ್ಚಿಯೇ ತೆರಳುವಂತಾಗಿದೆ.
ಸೊಳ್ಳೆಗಳ ಹಿಂಡು!
ಕಾಲುವೆಯಲ್ಲಿ ನಿಂತ ಕೊಳಚೆ ನೀರು ಸೊಳ್ಳೆಗಳ ಸಂತಾನೋತ್ಪತ್ತಿಯ ಕೇಂದ್ರವಾಗಿದೆ. ಮೇಲಿನಿಂದ ನೋಡಿದರೆ ಸೊಳ್ಳೆಗಳ ಹಿಂಡು ಹಾರಾಡುವುದು, ನೀರಿನಲ್ಲಿ ಕುಳಿತಿರುವುದು ಗೋಚರಿಸುತ್ತದೆ. ಸಮೀಪದಲ್ಲಿ ನೆಲೆಸಿರುವ ಜನರಿಗೆ ಸೊಳ್ಳೆ ಕಡಿತದ ಕಾಟವೂ ಹೆಚ್ಚಿದೆ. ಕೆಲವರು ಮನೆಯ ಕಸವನ್ನೂ ಎಸೆಯುತ್ತಿದ್ದಾರೆ. ಪರಿಸರದ ಸ್ವಾಸ್ಥ್ಯ ಕೆಡುತ್ತಿದ್ದು, ಕ್ರಮ ಕೈಗೊಳ್ಳುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ಮಣ್ಣಪಳ್ಳ ಕೆರೆ ಸೇರುತ್ತಿದೆ ಗಲೀಜು
ಈ ಪ್ರದೇಶದಲ್ಲಿ ಜನ ವಸತಿ, ವಾಣಿಜ್ಯ ಕಟ್ಟಡ, ಧಾರ್ಮಿಕ ಕೇಂದ್ರಗಳೂ ಇವೆ. ಅಲ್ಲದೆ, ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಸಿಬ್ಬಂದಿಯ ವಸತಿ ಗೃಹಗಳೂ ಇದ್ದು ಅವರೆಲ್ಲರೂ ಪರಿಸರದಲ್ಲಿ ಉಂಟಾದ ಗಲೀಜು ನೀರಿನ ಸಮಸ್ಯೆಯಿಂದ ಕಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೆ, ಕಾಲುವೆಯಲ್ಲಿ ಹರಿಯುತ್ತಿರುವ ಕೊಳಚೆನೀರು ವಾಯುವಿಹಾರದ ತಾಣವಾಗಿರುವ ಮಣ್ಣಪಳ್ಳದಲ್ಲಿರುವ ಕೆರೆ ಸೇರುತ್ತಿದೆ. ಕೆರೆಯ ಶುದ್ಧ ನೀರು ಮಲೀನವಾಗುವುದಲ್ಲದೆ, ವಿಷಕಾರಕ ಅಂಶಗಳಿಂದ ಜಲಚರಗಳ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು.
ಉಡುಪಿಯಲ್ಲಿ ಡ್ರೈನೇಜ್ ವ್ಯವಸ್ಥೆಯೇ ಸರಿಯಿಲ್ಲ. ಮಣಿಪಾಲ ಭಾಗದಲ್ಲಂತೂ ತೀವ್ರ ಸಮಸ್ಯೆಯಿದೆ. ಮಳೆ ನೀರು ಹರಿಯಲು ಇರುವ ಕಾಲುವೆಗಳಲ್ಲಿ ಮನೆಗಳ ಕೊಳಕು ನೀರು ಹರಿಯುತ್ತಿದೆ. ಪರಿಸರ ಹಾಗೂ ಜನರ ಆರೋಗ್ಯಕ್ಕೆ ದುಷ್ಪರಿಣಾಮ ಉಂಟಾಗುತ್ತಿದೆ. ಕಾಲುವೆಗಳಿಗೆ ಕೊಳಕು ನೀರು ಬಿಡದಂತೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆ, ನೋಟಿಸ್ ಕೊಟ್ಟರೆ ಸಾಲದು. ಸ್ಥಳಕ್ಕೆ ಬಂದು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.