ವಿಜ್ಞಾನ, ಸಾಹಿತ್ಯ ಲೋಕದ ಮರೆಯಲಾಗದ ಜ್ಞಾನ ಋಷಿ ಉಡುಪಿ ತೆಂಕನಿಡಿಯೂರು ಗ್ರಾಮದ ಡಾ. ವ್ಯಾಸ ರಾವ್​ ನಿಂಜೂರು. 
ಉಡುಪಿ

ಮರಾಠಿ ನೆಲದಲ್ಲಿ 'ಕನ್ನಡ' ಬೆಳಗಿದ ಡಾ.ವ್ಯಾಸ ರಾವ್​ ನಿಂಜೂರು ನಿಧನ

* ವಿಜ್ಞಾನಿಯ ಒಡಲಿನಿಂದ ಚಿಗುರಿದ್ದ ಅಕ್ಷರ ಕೃಷಿ

* ಸಾಹಿತ್ಯ ಲೋಕದ ಮರೆಯಲಾಗದ ಜ್ಞಾನ ಋಷಿ

ಉಡುಪಿ: ಕನ್ನಡ ಸಾಹಿತ್ಯ ಲೋಕದ ಹಿರಿಯ ಚೇತನ, ವಿಜ್ಞಾನಿ, ಕಾದಂಬರಿಕಾರರಾಗಿದ್ದ ಮೂಲತ: ಉಡುಪಿ ತೆಂಕನಿಡಿಯೂರು ಗ್ರಾಮದ ಡಾ. ವ್ಯಾಸ ರಾವ್​ ನಿಂಜೂರು (86) ಮಂಗಳವಾರ (ನ.3) ಬೆಳಗ್ಗೆ ಮುಂಬಯಿಯ ದೇವನಾರ ಆಸ್ಪತ್ರೆಯಲ್ಲಿ ನಿಧನರಾದರು.

ಕಲಾವಿದರ ಕುಟುಂಬ ಇವರದ್ದಾಗಿದ್ದು ಪತ್ನಿ ರಂಗಭೂಮಿ ಕಲಾವಿದೆ ಭಾರತಿ ನಿಂಜೂರು ಈ ಹಿಂದೆಯೇ ಮೃತಪಟ್ಟಿದ್ದಾರೆ. ಪುತ್ರ ಉದಯ ನಿಂಜೂರು ಖ್ಯಾತ ಸಂಗೀತ ನಿರ್ದೇಶಕರಾಗಿದ್ದು, ಪುತ್ರಿ ಸಂಧ್ಯಾ ಅವರೂ ಕೂಡ ಕಲಾವಿದೆಯಾಗಿದ್ದಾರೆ. ಮುಂಬಯಿಯ ಬಿಎಆರ್​ಸಿ ಕಾಲನಿಯಲ್ಲಿರುವ ಸ್ವಗೃಹದಲ್ಲಿ ಪುತ್ರನೊಂದಿಗೆ ನೆಲೆಸಿದ್ದರು.

ಶಿಕ್ಷಣ ಮಾಹಿತಿ

ವ್ಯಾಸ ರಾವ್​ ಅವರು ತೆಂಕನಿಡಿಯೂರಿನಲ್ಲಿ ತಂದೆ ಶ್ರೀನಿವಾಸ ನಿಂಜೂರು​. ತಾಯಿ ಸೀತಮ್ಮ ದಂಪತಿಯ ಪುತ್ರನಾಗಿ 1940 ಅ.6ರಂದು ಜನಿಸಿದರು. ಆರಂಭಿಕ ಶಿಕ್ಷಣವನ್ನು ಕೊಡವೂರಿನ ಗರಡಿ ಮಜಲು, ಮಿಲಾಗ್ರಿಸ್​ ಹೈಸ್ಕೂಲ್​ನಲ್ಲಿ ನಡೆಸಿದರು. ಉಡುಪಿಯ ಎಂಜಿಎಂ ಕಾಲೇಜ್​ನಲ್ಲಿ ಬಿಎಸ್ಸಿ ಓದಿ, ಮೈಸೂರು ವಿಶ್ವವಿದ್ಯಾಲಯದಿಂದ ಎಂಎಸ್ಸಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಗಳಿಂದ ಪಿಎಚ್​.ಡಿ ಗಳಿಸಿದರು.

ಉಪನ್ಯಾಸಕ ವೃತ್ತಿ

ಡಾ. ವ್ಯಾಸ ರಾವ್​ ಅವರು ಮಣಿಪಾಲದ ಕಸ್ತೂರ್ಬಾ ಮೆಡಿಕಲ್​ ಕಾಲೇಜ್​ನಲ್ಲಿ ಬಯೋಕೆಮೆಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ಕೆಲ ವರ್ಷದ ಬಳಿಕ ಮುಂಬಯಿಯಲ್ಲಿ ಭಾಭಾ ಪರಮಾಣು ಸಂಶೋಧಬಾ ಕೇಂದ್ರ (ಬಿಎಆರ್​ಸಿ)ದ ಬಯೋ ಕೆಮೆಸ್ಟ್ರಿ ಮತ್ತು ಆಹಾರ ತಂತ್ರಜ್ಞಾನ ವಿಭಾಗದಲ್ಲಿ ಆಹಾರ ವಿಜ್ಞಾನ ಶಾಖೆಯ ಪ್ರಮುಖ ಹುದ್ದೆ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ಬಳಿಕ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಜೀವರಸಾಯನ ಶಾಸ್ತ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ್ದರು.

87 ಸಂಶೋಧನಾ ಪ್ರಬಂಧ

ಭಾಭಾ ಪರಮಾಣು ಕೇಂದ್ರದಲ್ಲಿದ್ದ ಸಂದರ್ಭದಲ್ಲಿ ಅವರ 87 ಸಂಶೋಧನಾ ಪ್ರಬಂಧಗಳು ವಿವಿಧ ರಾಜ್ಯಗಳ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಅಂತರ್​ಕೋಶೀಯ ಲೈಸೋಸೋಮ್​ ಮತ್ತು ಲೈಸೋಸೋಮ್​ ಕಿಣ್ವಗಳ ಕುರಿತಾಗಿ ವಿಶೇಷ ಸಂಶೋಧನೆ ನಡೆಸಿದ್ದರು. ಆಹಾರ ವಿಜ್ಞಾನ, ಆಹಾರ ಸಂಸ್ಕರಣೆ ಮತ್ತು ಸಂರಕ್ಷಣೆ ಅವರ ಸಂಶೋಧನೆ ಕ್ಷೇತ್ರವಾಗಿದ್ದವು. ಆಹಾರ ಸಂರಕ್ಷಣೆಯಲ್ಲಿ ಗಾಮಾ ವಿಕಿರಣಗಳ ಬಳಕೆ, ಪ್ರೋಟಿನ್​ ನ್ಯೂನತೆ ಪ್ರಭಾವ, ಮಾನವ ಫಲೀಕರಣದಲ್ಲಿ ಕಿಣ್ವಗಳ ಪಾತ್ರ ಮುಂತಾದ ವಿಷಯಗಳಲ್ಲಿನ ಅವರ ಸಂಶೋಧನೆಗಳು ವಿಶ್ವಮಾನ್ಯತೆ ಗಳಿಸಿದವು.

ಸಾಹಿತಿಯಾಗಿ ಖ್ಯಾತಿ

ಡಾ. ನಿಂಜೂರು ಅವರು ವಿಜ್ಞಾನಿಯಾಗಷ್ಟೇ ಅಲ್ಲದೆ, ಕನ್ನಡದ ಖ್ಯಾತ ಸಾಹಿತಿಯಾಗಿಯೂ ಅಪಾರ ಕೃಷಿ ಮಾಡಿದ್ದಾರೆ. 1963ರಲ್ಲಿ ಕುಂಕುಮ ಕಥಾ ಸಂಕಲನದ ಮೂಲಕ ಸಾಹಿತ್ಯ ಕೃಷಿ ಆರಂಭಿಸಿದ್ದರು. ಉಸಿರು, ಚಾಮುಂಡೇಶ್ವರಿ ಭವನ, ತೆಂಕನಿಡಿಯೂರಿನ ಕುಳುವಾರಿಗಳು ಅವರ ಕಾದಂಬರಿ. ಮಂಚ, ದೂಜ ಮಾಸ್ತರರ ಮಗಳು ಬಸಿರಾದುದು ಅವರ ಕಥಾಸಂಕಲನ. ನಲ್ವತ್ತರ ನಲುಗು ಖ್ಯಾತ ನಾಟಕ ಕೃತಿಯಾಗಿವೆ. ಅಲ್ಲದೆ, ಬರೆದ ಅನೇಕ ನಾಟಕಗಳು ಪ್ರದರ್ಶನಗೊಡಿವೆ. ಮಕ್ಕಳಿಗಾಗಿ ಹೋಮಿಭಾಭಾ ಕೃತಿ ರಚಿಸಿದ್ದಾರೆ. ಅವರ 'ಆಗಾಗ ಅನಿಸಿದ್ದು' ಹೇಳುವ ಅಂಕಣ ಬರಹಗಳ ಸಂಕಲನ, ಹಲವಾರು ಕವಿತೆ, ಕಥೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಮಗ್ರ ಕಥೆಗಳು ಮತ್ತು ಆತ್ಮಕಥನ 'ಎಳೆದ ತೇರು' ಬಿಡುಗಡೆಯಾಗಿವೆ.

ಒಲಿದ ಪ್ರಶಸ್ತಿಗಳು

ಡಾ. ನಿಂಜೂರು ಅವರ ಉಸಿರು ಕಾದಂಬರಿಗೆ ತ್ರಿವೇಣಿ ಸ್ಮಾರಕ ಪ್ರಶಸ್ತಿ, ಚಾಮುಂಡೇಶ್ವರಿ ಭವನ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್​, ಮೂಡಬಿದಿರೆ 71ನೇ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಶ್ರೀ ಪ್ರಶಸ್ತಿ ಲಭಿಸಿದೆ. ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ, ಗೋಕುಲ ಪ್ರಶಸ್ತಿ, ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ ಹಾಗೂ ಮಹಾರಾಷ್ಟ್ರದ 6ನೆಯ ಸಾಂಸ್ಕೃತಿಕ ಸಮಾವೇಶದಲ್ಲಿ ಮಹಾರಾಷ್ಟ್ರದ ಶ್ರೇಷ್ಠ ಕನ್ನಡಿಗ ಪ್ರಶಸ್ತಿಗೆ ಭಾಜನರಾಗಿದ್ದರು. 2006ರಲ್ಲಿ ಇನ್ನಾದಲ್ಲಿ ನಡೆದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೂ ಆಗಿದ್ದರು.

ಪತ್ರಕರ್ತರಾಗಿಯೂ ಹೆಗ್ಗುರುತು

ಡಾ. ವ್ಯಾಸ ರಾವ್​ ಅವರು ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದಾರೆ. ಬುಲೆಟಿನ್​ ಆಫ್​ ಸೈನ್ಸ್​ ಆ್ಯಂಡ್​ ಟೆಕ್ನಾಲಜಿ, ಇರ್ರೆಡಿಯೇಷನ್​ ನ್ಯೂಸ್​, ಬೆಳಗು ಮುಂತಾದ ಪತ್ರಿಕೆಗಳ ಸಂಪಾದಕತ್ವದ ಹೊಣೆಗಾರಿಕೆ ನಿಭಾಯಿಸಿದ್ದಾರೆ. ಬಾಂಬೆ ಸೌತ್​ ಕೆನರಾ ಬ್ರಾಹ್ಮಿನ್ಸ್​ ಅಸೋಸಿಯೇಷನ್​ನ ಗೋಕುಲವಾಣಿ ಪತ್ರಿಕೆಯಲ್ಲಿ 3 ದಶಕಗಳ ಕಾಲ ಗೌರವ ಸಂಪಾದಕರಾಗಿದ್ದರು. ಮುಂಬಯಿ ಕನ್ನಡ ಸಾಹಿತ್ಯ ವಲಯದೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರು. ಕಾಲನಿರ್ಣಯ ಕನ್ನಡ ಕ್ಯಾಲಂಡರ್​ನ ನೇತೃತ್ವ ವಹಿಸಿದ್ದರು. ಕರ್ನಾಟಕ ಸಂಘ ಮುಂಬಯಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ನಿಮಂತ್ರಕರಾಗಿ ಕನ್ನಡದ ಕೆಲಸ ಮಾಡಿದ್ದರು. ನಂತರ ಕೆಲಕಾಲ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.