ಉಡುಪಿಯ ಬ್ರಹ್ಮಾವರದಲ್ಲಿ ಮಹಿಳಾ ಯಕ್ಷಗಾನ ಪ್ರದರ್ಶನದ ಸಭಾ ಕಾರ್ಯಕ್ರಮವನ್ನು ಡಾ.ತಲ್ಲೂರು ಶಿವರಾಂ ಶೆಟ್ಟಿ ಉದ್ಘಾಟಿಸಿದರು. ಪೂರ್ಣಿಮಾ, ರಾಮಚಂದ್ರ ಐತಾಳ್ ಗುಂಡ್ಮಿ, ಕೆ.ನರಸಿಂಹ ತುಂಗ ಇದ್ದರು.
* ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ ಅನಿಸಿಕೆ
* 'ಶೂರ್ಪನಖಾ ಮಾನಭಂಗ' ಪ್ರದರ್ಶನ ಉದ್ಘಾಟನೆ
ಉಡುಪಿ: ಯಕ್ಷಗಾನ ಕೇವಲ ಕಲೆಯಷ್ಟೇ ಅಲ್ಲ. ಅದು ಜ್ಞಾನಗಳ ಭಂಡಾರ. ಇಂದಿನ ಆಧುನಿಕ ಸಮಾಜಕ್ಕೆ ಯಕ್ಷಗಾನದ ಮೂಲಕ ಸಂಸ್ಕಾರ ಮಾರ್ಗ ನೀಡಬಹುದು. ಮಹಿಳೆಯೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಯಕ್ಷಗಾನ ಕಲಿತ ಮಹಿಳೆ ತನ್ನ ಕುಟುಂಬ, ಸಮಾಜಕ್ಕೆ ಸಂಸ್ಕಾರದ ದಾರಿ ತೋರಬಲ್ಲಳು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಂ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು.
ಸಾಲಿಗ್ರಾಮದ ಗುಂಡ್ಮಿ ಸದಾನಂದ ರಂಗ ಮಂಟಪದಲ್ಲಿ ಕಲಾಪೀಠ ಕೋಟ ಸಂಯೋಜನೆ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವ ಹಾಗೂ ಕೆ.ನರಸಿಂಹ ತುಂಗ ನಿರ್ದೇಶನದಲ್ಲಿ 'ಶೂರ್ಪನಖಾ ಮಾನಭಂಗ' ಮಹಿಳಾ ಯಕ್ಷಗಾನ ಪ್ರದರ್ಶನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಹಿರಿಯರೊಂದಿಗೆ ಇಂದಿನ ಮಕ್ಕಳು ಬೆರೆಯುತ್ತಲೇ ಇಲ್ಲ. ಹೀಗಾಗಿ ಮಕ್ಕಳಿಗೆ ಯಕ್ಷಗಾನ ಕಲಿಸಿದರೆ ಅವರ ವ್ಯಕ್ತಿತ್ವ ವಿಕಸನದೊಂದಿಗೆ ಉತ್ತಮ ಮಾರ್ಗ ಕಂಡುಕೊಳ್ಳಬಹುದಾಗಿದೆ. ಈ ಕಲೆಯನ್ನೂ ಕಲಿಸಿದರೆ ಅವರ ಶೈಕ್ಷಣಿಕ ಪ್ರಗತಿಗೂ ಪೂರಕವಾಗುತ್ತಿದೆ ಎಂಬುದು ಸಾಬೀತಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ್ ಗುಂಡ್ಮಿ ಮಾತನಾಡಿದರು. ಭಾಗವತ ಗಣೇಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಕಲಾ ನಿರ್ದೇಶಕ ಕೆ.ನರಸಿಂಹ ತುಂಗ ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಹಿಳೆಯರಿಂದ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಬಿಲ್ಲಾಡಿ ಗಣೇಶ್ ಆಚಾರ್ಯ, ಗಣೇಶ್ ಶೆಣೈ, ವಾಗ್ವಿಲಾಸ ಭಟ್ಟ ಹಾಗೂ ಮುಮ್ಮೇಳದಲ್ಲಿ ವೃಂದಾ, ಅನೂಷಾ, ಮಾನ್ಯ, ನಮನಾ, ಜಾಹ್ನವಿ, ಸುಜಾತಾ, ಮೇಧಾ, ಧನುಶ್ರೀ, ಇಂಚರಾ, ಆರಭಿ, ಈಶಾನಿ, ತನಿಷಾ ಅಭಿನಯಿಸಿದರು.
ಯಕ್ಷಗಾನ ಕಲಿತ ಮಕ್ಕಳಲ್ಲಿ ನಮ್ಮ ಪುರಾಣಗಳ ಜ್ಞಾನದೊಂದಿಗೆ ಸಂಸ್ಕಾರವೂ ಲಭಿಸುತ್ತದೆ. ಅದರಿಂದ ವೃದ್ಧಾಪ್ಯದಲ್ಲಿರುವ ತಂದೆ-ತಾಯಿ ಆಶ್ರಮ ಸೇರುವುದೂ ತಪ್ಪುತ್ತದೆ. ನನ್ನ ಮಕ್ಕಳು, ಮೊಮ್ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಅವರು ನೋವು ಅನುಭವಿಸುವುದೂ ತಪ್ಪುತ್ತದೆ. ಹೀಗಾಗಿ ಅಕಾಡೆಮಿಯಿಂದ ಮಕ್ಕಳು ಹಾಗೂ ಮಹಿಳೆಯರಿಗೆ ಯಕ್ಷಗಾನ ತರಬೇತಿ, ಪ್ರದರ್ಶನಕ್ಕೆ ಮಹತ್ವ, ಪ್ರೋತ್ಸಾಹ ನೀಡಲಾಗುತ್ತಿದೆ.