ಉಡುಪಿಯಲ್ಲಿ ಆಯೋಜಿಸಿದ್ದ ಡಾ. ಎಸ್.ಆರ್. ರಂಗನಾಥನ್ ಜನ್ಮದಿನಾಚರಣೆಯನ್ನು ಕಿಶೋರ್ ಎಚ್.ವಿ. ಉದ್ಘಾಟಿಸಿದರು. ವಿನೀತ್ ರಾವ್, ಡಾ. ಎಸ್.ಆರ್. ಅರುಣ್, ಡಾ. ಬಿ. ಜಗದೀಶ್ ಶೆಟ್ಟಿ ಇದ್ದರು.
* ಗ್ರಂಥಪಾಲಕ ಕಿಶೋರ್ ಎಚ್.ವಿ. ಅನಿಸಿಕೆ
* ಉಡುಪಿಯಲ್ಲಿ ಜನ್ಮದಿನಾಚರಣೆ ಉದ್ಘಾಟನೆ
ಉಡುಪಿ: ಗ್ರಂಥಾಲಯಕ್ಕೆ ಪಂಚಸೂತ್ರ ಮತ್ತು ಕೊಲೊನ್ ವರ್ಗೀಕರಣ ಮಾಡುವ ಮೂಲಕ ನವಭಾರತದ ಗ್ರಂಥಾಲಯದ ಪರಿಕಲ್ಪನೆಗೆ ಹೊಸದಿಕ್ಕು ಕಲ್ಪಿಸಿಕೊಟ್ಟ ಕೀರ್ತಿ ಡಾ. ಎಸ್.ಆರ್. ರಂಗನಾಥನ್ ಅವರಿಗೆ ಸಲ್ಲುತ್ತದೆ. ಗಣಿತ ಪ್ರಾಧ್ಯಾಪಕರಾಗಿದ್ದರೂ ಅವರಿಗೆ ಪುಸ್ತಕಗಳ ಮೇಲೆ ಅದಮ್ಯ ಪ್ರೀತಿಯಿತ್ತು. 'ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ'ರಾಗಿ ಅವರು ಕೈಗೊಂಡ ವ್ಯವಸ್ಥೆಯಿಂದ ಶಾಲಾ-ಕಾಲೇಜುಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಗ್ರಂಥಾಲಯ ಇರುವಂತಾಗಿದೆ ಎಂದು ಎಂಜಿಎಂ ಕಾಲೇಜಿನ ಗ್ರಂಥಪಾಲಕ ಕಿಶೋರ್ ಎಚ್.ವಿ. ತಿಳಿಸಿದರು.
ಉಡುಪಿಯಲ್ಲಿರುವ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಡಾ. ಎಸ್.ಆರ್. ರಂಗನಾಥನ್ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಎಂಜಿಎಂ ಕಾಲೇಜಿನ ಗಾಂಧಿಯನ್ ಅಧ್ಯಯನ ಕೇಂದ್ರದ ನಿರ್ದೇಶಕ ವಿನೀತ್ ರಾವ್, ಆರ್ಆರ್ಸಿಯ ಸಹಸಂಶೋಧಕ ಡಾ. ಎಸ್.ಆರ್. ಅರುಣ್ ಉಪಸ್ಥಿತರಿದ್ದರು.
ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು.