ಡಾ.ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ದಿನದ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.
ಉಡುಪಿ: ಉಡುಪಿ: ಭಾರತೀಯ ಜನಸಂಘದ ಸಂಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ದೇಶದ ಅಖಂಡತೆ ಮತ್ತು ಏಕತೆಗಾಗಿ ತಮ್ಮ ಪ್ರಾಣವನ್ನೇ ಬಲಿದಾನಗೈದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಏಕೀಕರಣಕ್ಕಾಗಿ ಹೋರಾಡಿದ ಅವರ ಜೀವನಾದರ್ಶಗಳು ಪಕ್ಷದ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಕ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ತಿಳಿಸಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಡಾ.ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ದಿನದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲ್ಕತ್ತಾ ವಿಶ್ವವಿದ್ಯಾಲಯದ ಅತ್ಯಂತ ಕಿರಿಯ ಉಪ ಕುಲಪತಿಯಾಗಿ ಸೇವೆ ಸಲ್ಲಿಸಿ, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಡಾ. ಮುಖರ್ಜಿ ಅವರು ಭಾರತದ ಮೊದಲ ಕೈಗಾರಿಕಾ ಮತ್ತು ಸರಬರಾಜು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ತುಷ್ಟೀಕರಣದ ನೀತಿಗಳನ್ನು ವಿರೋಧಿಸಿ ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನದೊಂದಿಗೆ ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಕಾನೂನು ವಿರೋಧಿಸಿದ್ದ ಮುಖರ್ಜಿ ಅವರು 1953ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಿದಾಗ ಬಂಧನಕ್ಕೊಳಗಾಗಿ ಜೈಲುವಾಸದಲ್ಲಿರುವಾಗಲೇ ಅನುಮಾನಾಸ್ಪದವಾಗಿ ನಿಧನರಾಗಿದ್ದರು ಎಂದು ತಿಳಿಸಿದರು.
ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಗಳೂರು ವಿಭಾಗ ಸಹ ಪ್ರಭಾರಿ ಜಯಂತ್ ಕೋಟ್ಯಾನ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.