ಉಡುಪಿ: ಕೆಇಎ ಪರೀಕ್ಷೆ ಬರೆದ 813 ಅಭ್ಯರ್ಥಿಗಳ ಪೈಕಿ ರಾಜ್ಯಮಟ್ಟದಲ್ಲಿ 23ನೇ ರ್ಯಾಂಕ್ ಗಳಿಸಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಡಾ. ಶ್ರೀಮತಿ ಅಡಿಗ ಅವರು ಪ್ರಾಂಶುಪಾಲೆಯಾಗಿ ಮುಂಬಡ್ತಿ ಪಡೆದಿದ್ದಾರೆ.
ಉಡುಪಿ ಜಿಲ್ಲೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ 12 ಕಾಲೇಜ್ಗಳ ಪೈಕಿ ಅತ್ಯಂತ ಪ್ರತಿಷ್ಠಿತ ಕಾಲೇಜ್ ಹೆಗ್ಗಳಿಕೆಯ ಅಜ್ಜರಕಾಡಿನ ಡಾ. ಜಿ.ಶಂಕರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ ಪ್ರಾಂಶುಪಾಲೆಯಾಗಿ ನೇಮಕಾತಿಗೊಂಡಿದ್ದು, ಸೋಮವಾರ (ನ.23) ಅಧಿಕಾರ ಸ್ವೀಕರಿಸಿದರು. ಪ್ರೊ. ಶ್ರೀಮತಿ ಅವರು ಇದೇ ಕಾಲೇಜ್ನಲ್ಲಿ ಗಣಿತ ವಿಭಾಗದ ಮುಖ್ಯಸ್ಥೆಯಾಗಿ ಹಾಗೂ ಐಕ್ಯೂಎಸಿ ಸಂಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು.
ಕೆಇಎ ಮೂಲಕ ಪರೀಕ್ಷೆ
ಕಾಲೇಜ್ ಶಿಕ್ಷಣ ಇಲಾಖೆಯಲ್ಲಿ ಸುಮಾರು 15 ವರ್ಷದಿಂದ 410 ಕಾಲೇಜ್ಗಳಲ್ಲಿ ಖಾಲಿ ಇರುವ ಗ್ರೇಡ್-1 ಪ್ರಾಂಶುಪಾಲರುಗಳ ಹುದ್ದೆಗೆ ಕೆಇಎ ಮೂಲಕ ಪರೀಕ್ಷೆ ನಡೆಸಿ, ಮೆರಿಟ್ ಆಧಾರದಲ್ಲಿ ಭರ್ತಿ ಮಾಡಲು 2022ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಬಳಿಕ 2023ರ ಜುಲೈ ತಿಂಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.
ಪರೀಕ್ಷೆಯ ಬಳಿಕ ನೇಮಕಾತಿ ಪ್ರಕ್ರಿಯೆಗೆ ಹಲವಾರು ಅಡೆ-ತಡೆ ಉಂಟಾಗಿ ಕುಂಟುತ್ತ ಸಾಗಿತ್ತು. ಕೊನೆಗೂ ಮಂಜೂರಾತಿಯಾದ 310 ಖಾಲಿ ಹುದ್ದೆಗಳಲ್ಲಿ 222 ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಕೌನ್ಸೆಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಲು ಅವಕಾಶ ನೀಡಿ ಸರ್ಕಾರದಿಂದ ನೇಮಕಾತಿ ಆದೇಶ ನೀಡಲಾಗಿದೆ.