ಉಡುಪಿಯಲ್ಲಿ ಆಯೋಜಿಸಿದ್ದ ಕಾರಂತ ಉಪನ್ಯಾಸ ಮತ್ತು ನಾಟಕ ಪ್ರದರ್ಶನವನ್ನು ಕೆ.ಪಿ. ಸುರೇಶ್ ಕಂಜರ್ಪಣೆ ಉದ್ಘಾಟಿಸಿದರು. ಬಿ.ಆರ್. ವೆಂಕಟರಮಣ ಐತಾಳ, ಡಾ.ಗಣನಾಥ ಶೆಟ್ಟಿ ಎಕ್ಕಾರು, ಪ್ರೊ.ಸುಬ್ರಹ್ಮಣ್ಯ ಜೋಶಿ, ಸತೀಶ್ ಕೊಡವೂರು, ಉದ್ಯಾವರ ನಾಗೇಶ್ ಕುಮಾರ್ ಇದ್ದರು.
* ಕೆ.ಪಿ. ಸುರೇಶ್ ಕಂಜರ್ಪಣೆ ಅಭಿಮತ
* ಉಪನ್ಯಾಸ, ನಾಟಕ ಪ್ರದರ್ಶನ ಉದ್ಘಾಟನೆ
ಉಡುಪಿ: ವರ್ತಮಾನದ ಜಿಜ್ಞಾಸೆ, ಸವಾಲು, ಬಿಕ್ಕಟ್ಟುಗಳ ಪ್ರಶ್ನೆಗಳಿಗೆ ಡಾ. ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಉತ್ತರವಿದೆ. ಆ ಒಳನೋಟುಗಳನ್ನು ನಾವು ಹುಡುಕುವ ಪ್ರಯತ್ನ ಮಾಡಿಲ್ಲ. ಕಾದಂಬರಿಗಳಿಂದಾಗಿಯೇ ಅವರು ಬಹಳ ಶ್ರೇಷ್ಠ ಸಾಹಿತಿಯಾಗಿದ್ದಾರೆ. ವರ್ತಮಾನದ ತಲ್ಲಣ, ಆತಂಕಗಳನ್ನು ಎದುರಿಸಲು ಬೇಕಾದ ಅಸ್ತ್ರ ಕಾರಂತರ ಕಾದಂಬರಿಯಲ್ಲಿದೆ ಎಂದು ಚಿಂತಕ ಕೆ.ಪಿ. ಸುರೇಶ್ ಕಂಜರ್ಪಣೆ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ವತಿಯಿಂದ ಹಾಗೂ ಉಡುಪಿಯ ರಥಬೀದಿ ಗೆಳೆಯರು (ರಿ.) ಸಾಂಸ್ಕೃತಿಕ ವೇದಿಕೆ ಸಹಕಾರದಲ್ಲಿ ಸೋಮವಾರ (ಡಿ.22) ಸಂಜೆ ಆಯೋಜಿಸಿದ್ದ ಕಾರಂತ ಉಪನ್ಯಾಸ ಮತ್ತು ನಾಟಕ ಪ್ರದರ್ಶನ ಉದ್ಘಾಟಿಸಿ 'ನಮ್ಮ ಕಾಲದಲ್ಲಿ ಕಾರಂತರು- ಒಂದು ವಿಷ್ಲೇಷಣೆ' ಕುರಿತು ಉಪನ್ಯಾಸ ನೀಡಿದರು.
ಹೋರಾಟಗಳಿಗೆ ಸ್ಫೂರ್ತಿ
ಈ ದೇಶದ ಎಲ್ಲ ಜ್ವಲಂತ ಸಮಸ್ಯೆಗಳ ಹೋರಾಟಗಳಲ್ಲಿ ಬಹಳ ಸ್ಫೂರ್ತಿಯ ನೆಲೆಯಾಗಿ ಹಾಗೂ ನೇರವಾಗಿ ಇದ್ದವರು ಕಾರಂತರು. 10 ವಿಶ್ವವಿದ್ಯಾನಿಲಯ ಮಾಡುವ ಕೆಲಸವನ್ನು ಹಾಗೂ 10 ಸಂಘಟನೆ ಮಾಡುವ ಗ್ರಾಮೀಣಾಭಿವೃದ್ಧಿಯ ಕೆಲಸವನ್ನು ಒಬ್ಬರೇ ಮಾಡಿದ್ದಾರೆ. ನಾಗರಿಕತೆ ಬೆಳೆಯಲು ಬೇಕಾದ ಶಿಕ್ಷಣ, ಸಾಹಿತ್ಯ, ಕಲೆ ಸೇರಿದಂತೆ ಎಲ್ಲ ಚಟುವಟಿಕೆಗಳನ್ನೂ ಬೌದ್ಧಿಕವಾಗಿ ಮಾಡಿದ್ದಾರೆ. ಕಾರಂತರ ಶಕ್ತಿ ಹೇಗಿತ್ತೆನ್ನುವುದು ಅವರು ಬರೆದ ಕಾದಂಬರಿಗಳೇ ತಿಳಿಸುತ್ತವೆ ಎಂದರು.
ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ ಮಾತನಾಡಿದರು. ಟ್ರಸ್ಟ್ನ ವಾರ್ತಾಪತ್ರವನ್ನು ಬಿಡುಗಡೆ ಮಾಡಲಾಯಿತು. ಡಾ.ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ರಥಬೀದಿ ಗೆಳೆಯರು ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ, ಟ್ರಸ್ಟ್ನ ಸದಸ್ಯ ಸಂಚಾಲಕ ಸತೀಶ್ ಕೊಡವೂರು ಉಪಸ್ಥಿತರಿದ್ದರು.
ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಸದಸ್ಯ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು.
'ಸೋಮಿಯ ಸೌಭಾಗ್ಯ' ಗೀತನಾಟಕ
ಸಭಾ ಕಾರ್ಯಕ್ರಮದ ಬಳಿಕ ಡಾ.ಕೆ.ಶಿವರಾಮ ಕಾರಂತ ರಚನೆ, ಭಿನ್ನಪಡ್ಜ ಅವರ ಸಂಗೀತ ಸಂಯೋಜನೆ ಹಾಗೂ ಗಣೇಶ್ ಮಂದಾರ್ತಿ ನಿರ್ದೇಶನದಲ್ಲಿ ಯಕ್ಷ ರಂಗಾಯಣ ರೆಪರ್ಟರಿ ಕಲಾವಿದರು 'ಸೋಮಿಯ ಸೌಭಾಗ್ಯ' ಎಂಬ ಗೀತನಾಟಕ ಪ್ರದರ್ಶಿಸಿದರು.
ಬಸವಣ್ಣ, ಕುವೆಂಪು ಮತ್ತು ಡಾ.ಅಂಬೇಡ್ಕರ್ ಮಾತ್ರ ಸದ್ಯ ಕರ್ನಾಟಕದ ಸಾಂಸ್ಕೃತಿಕ, ಬೌದ್ಧಿಕ ಚರ್ಚೆಯ, ಸ್ಫೂರ್ತಿಯ ಮೂಲವಾಗಿದ್ದಾರೆ. 25 ವರ್ಷದ ಹಿಂದೆ ಕಾರಂತರೂ ಸಹ ಸ್ಫೂರ್ತಿಯ ಮೂಲವಾಗಿದ್ದರು. ಆದರೂ ಕಾರಂತರು ಸ್ಫೂರ್ತಿಯ ಮೂಲವಾಗಿ ಕರ್ನಾಟಕದ ಎಲ್ಲ ಚಲನಶೀಲ ಚಟುವಟಿಕೆಗಳ ಭಾಗವಾಗಿಲ್ಲ ಏಕೆ ಎನ್ನುವುದು ಪ್ರಶ್ನೆಯಾಗಿದೆ.