ಉಡುಪಿಯ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಆರ್​.ಕೆ. ಪದ್ಮನಾಭ ಅವರಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು 'ಶ್ರೀಕೃಷ್ಣಗಿತಾನುಗ್ರಹ ಪ್ರಶಸ್ತಿ' ನೀಡಿದರು. ಸುಶ್ರೀಂದ್ರ ತೀರ್ಥ ಶ್ರೀಪಾದರು ಇದ್ದರು. 
ಉಡುಪಿ

ದಾಸ ಪರಂಪರೆಗೆ ಡಾ. ಆರ್​.ಕೆ. ಪದ್ಮನಾಭ ಕೊಡುಗೆ ಅಪಾರ

* ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

* ಸಾಧಕರಿಗೆ 'ಶ್ರೀಕೃಷ್ಣಗಿತಾನುಗ್ರಹ' ಪ್ರಶಸ್ತಿ ಪ್ರದಾನ

ಉಡುಪಿ: ಉಡುಪಿ ಶ್ರೀಕೃಷ್ಣನ ಸೇವಾ ಕೈಂಕರ್ಯದ ನಾಲ್ಕನೇ ಅವಧಿಯನ್ನು ಭಗವದ್ಗೀತಾ ಪ್ರಸಾರಕ್ಕೆ ಮೀಸಲಿಟ್ಟು ಅದಕ್ಕೆ ಪೂರಕವಾಗಿ ಎರಡು ವರ್ಷಗಳ ಕಾಲ ನಿರಂತರ ಅಭಿಯಾನ ನಡೆಸಲಾಗಿದೆ. 'ವಿಶ್ವಗೀತಾ' ಪರ್ಯಾಯ ಎಂಬ ಅಭಿನಾಮದೊಂದಿಗೆ ಅತ್ಯಂತ ಯಶಸ್ವಿಯಾಗಿ ಗೀತಾಚಾರ್ಯನ ಆರಾಧನೆ ಮಾಡಿದ್ದೇವೆ. ಅದರ ಮುಂದುವರಿದ ಭಾಗವಾಗಿ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ನಾಡಿನ ದಾಸ ಸಾಹಿತ್ಯ ಪ್ರಜ್ವಲಿಸಿದ ಡಾ.ಆರ್​.ಕೆ. ಪದ್ಮನಾಭ ಅವರು ದಾಸ ಪರಂಪರೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಶ್ರೀಕೃಷ್ಣ ಮಠದ ವತಿಯಿಂದ ಹಾಗೂ ಸುಗುಣೇಂದ್ರ ಶ್ರೀಗಳ ಚತುರ್ಥ ವಿಶ್ವ ಗೀತಾ ಪರ್ಯಾಯದ ಅಂತಿಮ ಹಂತದಲ್ಲಿ ಶನಿವಾರ (ಜ.3) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ ವಿದ್ವಾನ್​, ಗಾನಕಲಾಭೂಷಣ ಡಾ.ಆರ್​.ಕೆ. ಪದ್ಮನಾಭ ಅವರಿಗೆ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣಗಿತಾನುಗ್ರಹ ಪ್ರಶಸ್ತಿ' ನೀಡಿ ಗೌರವಿಸಿ ಆಶೀರ್ವಚನ ನೀಡಿದರು. 
ಎರಡು ವರ್ಷದಲ್ಲಿ ಪರ್ಯಾಯದಲ್ಲಿ ಕೈಗೊಂಡ ಕಾರ್ಯಗಳ ಸಿಂಹಾವಲೋಕನ ಮಾಡಿದ ಶ್ರೀಗಳು, ಪದ್ಮನಾಭ ಅವರಿಗೆ ನಮ್ಮ ಪುತ್ತಿಗೆ ಮಠದ ಮೇಲೆ ವಿಶೇಷ ಅಭಿಮಾನವಿದೆ. ವಾದಿರಾಜರ ಕೃತಿಗಳನ್ನು ಹಾಡಿದ್ದಾರಲ್ಲದೆ, ಸ್ವಯಂ 700ಕ್ಕೂ ಅಧಿಕ ದಾಸ ಕೃತಿಗಳನ್ನು ರಚಿಸಿದ್ದಾರೆ. ವಿದೇಶಗಳಲ್ಲಿ ಇರುದ ನಮ್ಮ ವಿವಿಧ ಮಠದಲ್ಲೂ ಸಂಗೀತ ಕಛೇರಿ ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಸಾಧಕ ಉದ್ಯಮಿಗಳಿಗೆ ಸನ್ಮಾನ

ಉದ್ಯಮಿಗಳಾದ ನವದೆಹಲಿಯ ಐಶ್ವರ್ಯಾ ಮಹಾಜನ್​ ಹಾಗೂ ಆನಂದ ಕಲ್ಯಾಣಿ ಕುಟುಂಬಸ್ಥರನ್ನು ಶ್ರೀಗಳು ಗೌರವಿಸಿ, ಸನ್ಮಾನಿಸಿದರು. ಪುತ್ತಿಗೆ ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಶ್ರೀಮಠದ ದಿವಾನ ನಾಗರಾಜ್​ ಆಚಾರ್ಯ, ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್​ ತಂತ್ರಿ  ಉಪಸ್ಥಿತರಿದ್ದರು.
ಮಠದ ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಡಾ. ಆರ್​.ಕೆ. ಪದ್ಮನಾಭ ಅವರಿಂದ ದಾಸಕೃತಿಗಳ ಗಾಯನ ನಡೆಯಿತು.