ರಾಷ್ಟ್ರೀಯ ಮಟ್ಟದ 'ಆದಿಮ ಕಲಾ ರತ್ನ' ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ರವೀಂದ್ರ ಕೋರಿಸೆಟ್ಟರ್.
* ದೇಶವ್ಯಾಪಿ ಪುರಾತತ್ತ್ವ ಚಟುವಟಿಕೆಗಳಲ್ಲಿ ನಿರತ ಹೆಮ್ಮೆಯ ಕನ್ನಡಿಗ
ಉಡುಪಿ: ಆದಿಮ ಕಲಾ ಟ್ರಸ್ಟ್ (ರಿ.) ಉಡುಪಿಯ ಪ್ರಥಮ ವಾರ್ಷಿಕೋತ್ಸವದ ನಿಮಿತ್ತ ಭಾರತೀಯ ಪುರಾತತ್ತ್ವದ ಪ್ರಖ್ಯಾತ ವಿದ್ವಾಂಸ ಡಾ. ರವೀಂದ್ರ ಕೋರಿಸೆಟ್ಟರ್ ಅವರನ್ನು "ಆದಿಮ ಕಲಾ ರತ್ನ' ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ.
ರವಿ ಕೋರಿಸೆಟ್ಟರ್ ಎಂದೇ ಖ್ಯಾತರಾಗಿರುವ ಅವರು, ದೇಶವ್ಯಾಪಿ ಪುರಾತತ್ತ್ವ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಡೆಕ್ಕನ್ ಕಾಲೇಜು ಪೂನಾದಲ್ಲಿ ಸ್ನಾತಕೋತ್ತರ ಮತ್ತು ಪಿ.ಎಚ್ಡಿ ಪದವಿ ಗಳಿಸಿದ್ದು, ಧಾರವಾಡದ ಕರ್ನಾಟಕ ವಿವಿಯಲ್ಲಿ ಪುರಾತತ್ತ್ವ ಪ್ರಾಧ್ಯಾಪಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ನಿವೃತ್ತಿಯ ನಂತರವೂ ವಿವಿಧ ಅಧ್ಯಯನ ಪೀಠಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡಿಸ್ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಗನಕಲ್ಲು ಉತ್ಖನನ ಅವರ ಬಹುಮುಖ್ಯ ಕೊಡುಗೆಗಳಲ್ಲಿ ಒಂದು. ಬಳ್ಳಾರಿಯ ರಾರ್ಬಟ್ ಬ್ರೂಸ್ ಫೂಟ್ ಪುರಾತತ್ತ್ವ ವಸ್ತು ಸಂಗ್ರಹಾಲಯ ಅವರ ಕನಸಿನ ಕೂಸು. ಇಂತಹ ಹೆಮ್ಮೆಯ ಕನ್ನಡಿಗನಿಗೆ 'ಆದಿಮ ಕಲಾ ರತ್ನ' ಪ್ರಶಸ್ತಿ ನೀಡಲಾಗುತ್ತಿದೆ ಎಂದು ಟ್ರಸ್ಟ್ನ ಸ್ಥಾಪಕ ಸಂಚಾಲಕ ಪ್ರೊ. ಟಿ. ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.