ನವದೆಹಲಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಣಿಪಾಲದ ಡಾ.ರಾಮದಾಸ್​ ಎಂ. ಪೈ ಅವರ ಪರವಾಗಿ ಡಾ. ಶರತ್​ ಕೆ. ರಾವ್​ 'ಲೆಜೆಂಡರಿ ಇನ್​ಸ್ಟಿಟ್ಯೂಟ್​ ಬಿಲ್ಡರ್​ ಅವಾರ್ಡ್'ಅನ್ನು ಡಾ. ಮುರಳಿ ಮನೋಹರ ಜೋಶಿ ಅವರಿಂದ ಸ್ವೀಕರಿಸಿದರು. 
ಉಡುಪಿ

ಡಾ. ರಾಮದಾಸ್​ ಪೈಗೆ 'ಲೆಜೆಂಡರಿ ಇನ್​ಸ್ಟಿಟ್ಯೂಟ್​ ಬಿಲ್ಡರ್​' ಪ್ರಶಸ್ತಿ

* ಗೌರವ ಸ್ವೀಕರಿಸಿದ ಮಾಹೆಯ ಕುಲಪತಿ ಡಾ. ಶರತ್​ ಕೆ. ರಾವ್​

ಉಡುಪಿ: ಮಣಿಪಾಲದ ಅಕಾಡೆಮಿ ಆಫ್​ ಹೈಯರ್​ ಎಜುಕೇಷನ್​ (ಮಾಹೆ)ನ ಕುಲಾಧಿಪತಿ ಡಾ.ರಾಮದಾಸ್​ ಎಂ. ಪೈ ಅವರು ಫೆಡರೇಷನ್​ ಆಫ್​ ಇಂಡಿಯನ್​ ಛೇಂರ್ಬಸ್​ ಆಫ್​ ಕಾಮರ್ಸ್​ ಆ್ಯಂಡ್​ ಇಂಡಸ್ಟ್ರಿ (ಎಫ್​ಐಸಿಸಿಐ) ನೀಡುವ ಪ್ರತಿಷ್ಠಿತ 'ಲೆಜೆಂಡರಿ ಇನ್​ಸ್ಟಿಟ್ಯೂಟ್​ ಬಿಲ್ಡರ್​ ಅವಾರ್ಡ್​-2026'ಕ್ಕೆ ಭಾಜನರಾಗಿದ್ದಾರೆ.

ನವದೆಹಲಿಯಲ್ಲಿ ಅ.8ರಂದು ನಡೆದ 21ನೇ ಎಫ್​ಐಸಿಸಿಐ ಉನ್ನತ ಶಿಕ್ಷಣ ಶೃಂಗಸಭೆಯ ನಿಮಿತ್ತ ಆಯೋಜಿಸಲಾಗಿದ್ದ 12ನೇ ಎಫ್​ಐಸಿಸಿಐ ಉನ್ನತ ಶಿಕ್ಷಣ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವ ಡಾ. ಮುರಳಿ ಮನೋಹರ ಜೋಶಿ ಪ್ರಶಸ್ತಿ ಪ್ರದಾನ ಮಾಡಿದರು. ಡಾ. ರಾಮದಾಸ್​ ಎಂ. ಪೈ ಅವರ ಪರವಾಗಿ ಮಾಹೆಯ ಕುಲಪತಿ ಡಾ. ಶರತ್​ ಕೆ. ರಾವ್​ ಗೌರವ ಸ್ವೀಕರಿಸಿದರು.

ಡಾ.ರಾಮದಾಸ್​ ಎಂ. ಪೈ.

1979ರಲ್ಲಿ ಡಾ.ತೋನ್ಸೆ ಮಾಧವ ಅನಂತ ಪೈ (ಡಾ.ಟಿಎಂಎ ಪೈ) ಅವರ ನಿಧನ ನಂತರ ಸಂಸ್ಥೆಯ ನೇತೃತ್ವ ವಹಿಸಿಕೊಂಡು ತಂದೆಯ ಪ್ರೇರಣೆಯಿಂದ ಶಿಕ್ಷಣ ಮತ್ತು ಆರೋಗ್ಯಸೇವೆ, ಸಂಶೋಧನಾ ಕ್ಷೇತ್ರದ ಮೂಲಕ ಮಣಿಪಾಲವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಟ್ಟಿ, ಬೆಳೆಸಿ ಗುರುತಿಸಿದರು. ಅಲ್ಲದೆ, ಸಮಾಜಪರ ಕಾರ್ಯಗಳ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದರು. ಅವರ ಸಾಧನೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ತಮ್ಮ ದೂರದೃಷ್ಟಿ, ದೃಢಸಂಕಲ್ಪ ಮತ್ತು ಕ್ರಿಯಾಶೀಲತೆಯಿಂದ ಮಣಿಪಾಲ ಸಮೂಹ ಸಂಸ್ಥೆಯ ಶೈಕ್ಷಣಿಕ, ಆರೋಗ್ಯ ಸೇವೆಯನ್ನು ನೇಪಾಳ, ಮಲೇಷಿಯಾ, ಸಂಯುಕ್ತ ಅರಬ್​ ಎಮಿರೇಟ್ಸ್​ ಹಾಗೂ ಆಂಟಿಗುವಾಕ್ಕೂ ವಿಸ್ತರಿಸಿ ಗಮನ ಸೆಳೆದರು. 2018ರಲ್ಲಿ ಡಾ.ರಾಮದಾಸ ಪೈ ಅವರು ಎಫ್​ಐಸಿಸಿಐ ಇದರ 'ಜೀವಮಾನ ಸಾಧನೆ' ಪ್ರಶಸ್ತಿಗೂ ಭಾಜನರಾಗಿದ್ದರು.