ಉಡುಪಿಯಲ್ಲಿ ಆಯೋಜಿಸಿದ್ದ 'ಗಮಕ ವಾಚನ ವ್ಯಾಖ್ಯಾನ' ಕಾರ್ಯಕ್ರಮವನ್ನು ಡಾ.ರಾಘವೇಂದ್ರ ರಾವ್ ಉದ್ಘಾಟಿಸಿದರು. ಪಲ್ಲವಿ ಕೆದ್ಲಾಯ, ನಿರಂಜನ್ ಭಟ್, ವೆಂಕಟಕೃಷ್ಣ ಭಟ್, ಆದ್ಯತಾ ಭಟ್, ಸುಬ್ರಹ್ಮಣ್ಯ ಜೋಶಿ ಇದ್ದರು.
ವ್ಯಾಖ್ಯಾನಕಾರ ಡಾ.ರಾಘವೇಂದ್ರ ರಾವ್ ಅಭಿಪ್ರಾಯ
* ಚಕ್ರವರ್ತಿ ದಿಲೀಪ ರಾಜನ 'ಸತ್ತ್ವ ಪರೀಕ್ಷೆ' ಕಥಾಭಾಗ ಪ್ರಸ್ತುತಿ
ಉಡುಪಿ: ಗಮಕ ವಾಚನವು ಪುರಾತನ ಕಲೆ. ಇಂದಿನ ಪೀಳಿಗೆಯವರಿಗೆ ಇದರ ಅರಿವು ಇಲ್ಲ. ಪುರಾಣ ಕಥಾನಕಗಳನ್ನು ತಿಳಿದುಕೊಳ್ಳಲು ಯಕ್ಷಗಾನ, ತಾಳಮದ್ದಳೆಯಂತೆ ಇದೂ ಸಹ ಉತ್ತಮ ಮಾಧ್ಯಮವಾಗಿದೆ. ಜಿಲ್ಲಾ ಗಮಕ ಕಲಾ ಪರಿಷತ್ ವತಿಯಿಂದ ಅಭಿಯಾನದ ಮೂಲಕ ಈ ಕಲೆಯನ್ನು ಉಳಿಸಿ, ಬೆಳೆಸಿ ಮುನ್ನಡೆಸುವ ಕಾರ್ಯ ಮಾಡಲಾಗುತ್ತಿದೆ. ಧರ್ಮ ಜಾಗೃತಿಗೆ ಅತ್ಯಂತ ಪೂರಕ ವಿಧಾನ ಇದಾಗಿದೆ ಎಂದು ಖ್ಯಾತ ಗಮಕ ವ್ಯಾಖ್ಯಾನಕಾರ ಡಾ.ರಾಘವೇಂದ್ರ ರಾವ್ ಉಡುಪಿ ತಿಳಿಸಿದರು.
ಅರಿತೋಡು ಶ್ರೀ ಜನಾರ್ದನ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಶ್ರಾವಣ ಮಾಸದ ನಿಮಿತ್ತ ಕಲ್ಯಾಣಿ ಕಲಾಕೇಂದ್ರ (ರಿ.) ಸುಬ್ರಹ್ಮಣ್ಯನಗರದ ವತಿಯಿಂದ ಆಯೋಜಿಸಿದ್ದ 'ಗಮಕ ವಾಚನ ವ್ಯಾಖ್ಯಾನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಪಾಧ್ಯಕ್ಷ ವೆಂಕಟಕೃಷ್ಣ ಭಟ್, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಲಾಕೇಂದ್ರದ ಕೋಶಾಧಿಕಾರಿ ಆದ್ಯತಾ ಭಟ್ ಪ್ರಾರ್ಥಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ಪರಿಚಯಿಸಿದರು. ಕೇಂದ್ರದ ಅಧ್ಯಕ್ಷ ನಿರಂಜನ್ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭಾ ಕರ್ಯಕ್ರಮದ ಬಳಿಕ ಡಾ.ರಾಘವೇಂದ್ರ ರಾವ್ ಹಾಗೂ ಗಮಕ ವಾಚಕಿ ಪಲ್ಲವಿ ಕೆದ್ಲಾಯ ಬ್ರಹ್ಮಾವರ ಅವರು ಚಕ್ರವರ್ತಿ ದಿಲೀಪ ರಾಜನ ಕಥೆಯನ್ನೊಳಗೊಂಡ 'ಸತ್ತ್ವ ಪರೀಕ್ಷೆ' ಎಂಬ ಕಥಾಭಾಗವನ್ನು ಭಾಮಿನಿ ಷಟ್ಪದಿಯಲ್ಲಿ ಪ್ರಸ್ತುತಪಡಿಸಿದರು. ದೇವಳದ ಅರ್ಚಕರಾದ ಗೋಪಾಲಕೃಷ್ಣ ಉಪಾಧ್ಯ, ಶ್ರೀಕಾಂತ ಉಪಾಧ್ಯ ಸಹಕರಿಸಿದರು.