ಆಳ್ವಾಸ್‌ನಲ್ಲಿ ಡಾ.ನರಹಳ್ಳಿ ಬಾಲಸುಬ್ರಮಣ್ಯ ಮತ್ತು ಜೀವನ: ಒಂದು ಪಟ್ಟಾಂಗ-ಪ್ರೀತಿಯ ಸಖ್ಯ-ವಿಶೇಷ ಕಾರ್ಯಕ್ರಮ ನಡೆಯಿತು. ಡಾ.ಎಂ.ಮೋಹನ ಆಳ್ವ, ಉಪನ್ಯಾಸಕಿ ಡಾ.ಸುಧಾರಾಣಿ, ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್ ಇದ್ದರು. 
ಉಡುಪಿ

ಡಾ.ನರಹಳ್ಳಿ ಕೃತಿಗಳಲ್ಲಿದೆ ಜನಪರ ಕಾಳಜಿ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಕನ್ನಡ ವಿಭಾಗ ಬೆಂಗಳೂರಿನ ಅಭಿನವ ಪ್ರಕಾಶನದ ಸಹಯೋಗದಲ್ಲಿ ಡಾ.ನರಹಳ್ಳಿ ಬಾಲಸುಬ್ರಮಣ್ಯ ಮತ್ತು ಜೀವನ: ಒಂದು ಪಟ್ಟಾಂಗ-ಪ್ರೀತಿಯ ಸಖ್ಯ ಎಂಬ ವಿಶೇಷ ಕಾರ್ಯಕ್ರಮವನ್ನು ಶನಿವಾರ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯರು ಬಹುಮುಖಿ ಚಿಂತಕರಾಗಿದ್ದು, ತಮ್ಮದೇ ಆದ ವಿಶಿಷ್ಟ ಓದುಗ ವಲಯವನ್ನು ಹೊಂದಿದವರು. ಜನಸಾಮಾನ್ಯರ ಬದುಕಿಗೆ ಹತ್ತಿರವಾದ ಸಾಮಾಜಿಕ ವಿಚಾರಗಳನ್ನು ಆಧರಿಸಿ ಕೃತಿಗಳನ್ನು ರಚಿಸಿದ್ದು, ಅದು ಅವರ ಜನಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್ ಮಾತನಾಡಿದರು. ಸಂವಾದದಲ್ಲಿ ಮಾತನಾಡಿದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರೀತಿ ವ್ಯಾಖ್ಯಾನಕ್ಕೆ ಸಿಗದ ವಿಸ್ಮಯಕರ ಭಾವನೆ. ಅದು ಸ್ವಾರ್ಥರಹಿತವಾಗಿದ್ದು, ಅನುಭವದ ಮೂಲಕವೇ ಅದರ ಸಾರ್ಥಕತೆಯನ್ನು ಅರಿಯಲು ಸಾಧ್ಯ ಎಂದರು.
ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯರ ಜೀವನಪ್ರೀತಿ ಮತ್ತು ವ್ಯಕ್ತಿತ್ವ ಕುರಿತು ಮೈಸೂರು ಮಹಾಜನ ಕಾಲೇಜಿನ ಕನ್ನಡ ವಿಭಾಗದ ಡಾ. ಎಚ್.ಆರ್.ತಿಮ್ಮೇಗೌಡ ಹಾಗೂ ಅವರ ಸಾಹಿತ್ಯ ಪ್ರೀತಿ ಕುರಿತು ಹೊನ್ನಾವರ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ನಾಗರಾಜ ಹೆಗಡೆ ಅಪಗಾಲ ವಿಚಾರ ಮಂಡಿಸಿದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಸುಧಾರಾಣಿ ಸಂವಾದ ನಿರ್ವಹಿಸಿದರು. ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನರಹಳ್ಳಿಯವರ ಆಯ್ದ ಪುಸ್ತಕಗಳನ್ನು ಅಧ್ಯಯನ ಮಾಡಿ ತಮ್ಮ ಅಭಿಪ್ರಾಯಗಳನ್ನುಹಂಚಿಕೊಂಡರು.
ಆಳ್ವಾಸ್ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಯೋಗೀಶ್ ಕೈರೋಡಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಬೆಂಗಳೂರಿನ ಅಭಿನವ ಪ್ರಕಾಶನದ ನ.ರವಿಕುಮಾರ ವಂದಿಸಿದರು. ವಿದ್ಯಾರ್ಥಿನಿಯರಾದ ಸೌಮ್ಯ ಕುಂದರ್ ಹಾಗೂ ಅನೀಶಾ ಶೆಟ್ಟಿ ನಿರೂಪಿಸಿದರು. ಯಶೋದಾ ಪ್ರಜ್ಞೆಯ ಲೇಖಕಿ ರಜನಿ ನರಹಳ್ಳಿ ಹಾಗೂ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.