ಉಡುಪಿಯಲ್ಲಿ ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ಜನ್ಮದಿನದ ನಿಮಿತ್ತ ಆಯೋಜಿಸಿದ್ದ 'ವ್ಯಸನಮುಕ್ತ ದಿನಾಚರಣೆ'ಯನ್ನು ಎಂ.ಎ. ಗಫೂರ್ ಉದ್ಘಾಟಿಸಿದರು. ಡಾ. ಎಚ್.ಅಶೋಕ್, ಮಂಜುನಾಥ್ ಬಿ., ಡಾ. ಪಿ.ವಿ. ಭಂಡಾರಿ, ಡಾ. ಗೌರಿ ಪ್ರಭು ಇದ್ದರು.
* ಯುವಜನತೆಗೆ ಎಂ.ಎ. ಗಫೂರ್ ಸಲಹೆ
* ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ಜಯಂತಿ
ಉಡುಪಿ: ತಂತ್ರಜ್ಞಾನದ ಈ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳು ಸಮಾಜದ ಸ್ವಾಸ್ಥ$್ಯ ಕೆಡಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ಯುವಜನತೆ ಮಾದಕ ವ್ಯಸನಕ್ಕೆ ಬಲಿಯಾಗದಂತೆ ಎಚ್ಚರವಹಿಸಬೇಕಿದೆ. ಈ ಪುಣ್ಯ ಭೂಮಿಯಲ್ಲಿ ಹಲವು ಸಾಧು-ಸಂತ, ಮಹಾಂತರು ಅನುಭವದ ಜ್ಞಾನ ದೀಪ ಹೊತ್ತಿಸಿದ್ದಾರೆ. ಡಾ. ಮಹಾಂತ ಶಿವಯೋಗಿಗಳು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರೇರಕರಾಗಿದ್ದಾರೆ. ಯುವಜನತೆ ಶ್ರೀಗಳು ಸೂಚಿತ ಸನ್ಮಾರ್ಗದಲ್ಲಿ ನಡೆದು ಬದುಕನ್ನು ಸುಂದರ ಮಾಡಿಕೊಳ್ಳಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಸಲಹೆ ನೀಡಿದರು.
ಉಡುಪಿ ನಗರದಲ್ಲಿರುವ ನೇತ್ರಜ್ಯೋತಿ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಆಶ್ರಯದಲ್ಲಿ ಶನಿವಾರ (ಆ.1) ಆಯೋಜಿಸಿದ್ದ ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ಜನ್ಮದಿನದ ನಿಮಿತ್ತ 'ವ್ಯಸನಮುಕ್ತ ದಿನಾಚರಣೆ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ. ಪಿ.ವಿ. ಭಂಡಾರಿ ವಿಶೇಷ ಉಪನ್ಯಾಸ ನೀಡಿದರು. ನೇತ್ರಜ್ಯೋತಿ ಕಾಲೇಜಿನ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗೌರಿ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಅಶ್ವಿನಿ ಮಾದಕ ವಸ್ತು ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಾಚಾರ್ಯ ಮಧ್ವ ವಲ್ಲಭ ಆಚಾರ್ಯ, ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಲೇಜಿನ ಚೀಫ್ ಕೋ-ಆರ್ಡಿನೇಟರ್ ಮಾಧವ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಮಾತನಾಡಿ, ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ 1930ರ ಆ.1ರಂದು ಜನಿಸಿದ ಶಿವಯೋಗಿಗಳು 10ನೇ ವಯಸ್ಸಿನಲ್ಲೇ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿಗಳಾದರು. ಅನೇಕ ಸಮಾಜ ಸುಧಾರಣೆ ಕೈಗೊಂಡಿದು, ಪ್ರಮುಖವಾಗಿ ವ್ಯಸನಮುಕ್ತ ಸಮಾಜ ನಿಮಾರ್ಣಕ್ಕೆ 1975ರಲ್ಲಿ ಕೈಗೊಂಡ 'ಮಹಾಂತ ಜೋಳಿಗೆ' ಎಂಬ ಅಭಿಯಾನ ಅತ್ಯಂತ ವಿಶಿಷ್ಟವಾದುದು. ಕುಡಿತದ ಚಟದಿಂದ ಸಾವಿರಾರು ಕುಟುಂಬಗಳು ಹಾಳಾಗುತ್ತಿರುವುದನ್ನು ಕಂಡು ಅಂತಹ ದುಶ್ಚಟಗಳಿಗೆ ಒಳಗಾಗಿರುವವನ್ನು ಮುಕ್ತಗೊಳಿಸಲು ಹೆಗಲಿಗೆ ಜೋಳಿಗೆ ಹಾಕಿ ಮನೆಮನೆಗೆ ತೆರಳಿ 'ನಿಮ್ಮ ದುಶ್ಚಟಗಾಳದ ಬೀಡಿ, ಸಿಗರೇಟ್, ಗಾಂಜಾ, ಸಾರಾಯಿ, ಗುಟ್ಖಾ ಇನ್ನಿತರ ವ್ಯಸನವನ್ನು ನನ್ನ ಜೋಳಿಗೆಗೆ ಹಾಕಿ' ಎಂದು ಮನವಿ ಮಾಡುತ್ತಿದ್ದರು. ಲಕ್ಷಾಂತರ ಕುಟುಂಬ ರಕ್ಷಿಸಿದ ಖ್ಯಾತಿ ಅವರದ್ದು ಎಂದರು.
ಸರ್ಕಾರವು ವ್ಯಸನಮುಕ್ತ ಸಮಾಜ ನಿಮಾರ್ಣಕ್ಕೆ ಕಟಿಬದ್ಧವಾಗಿದೆ ಎನ್ನುವುದಕ್ಕೆ ಶಿವಯೋಗಿಗಳ ಜನ್ಮದಿನವನ್ನು ವ್ಯಸನಮುಕ್ತ ದಿನವನ್ನಾಗಿ ಆಚರಿಸುತ್ತಿರುವುದೇ ನಿದರ್ಶನ. ಶೈಕ್ಷಣಿಕವಾಗಿ ಮುಂದಿರುವ ಉಭಯ ಜಿಲ್ಲೆಗಳಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿರುವುದು ಚಿಂತೆಗೀಡು ಮಾಡುವ ವಿಚಾರ. ಇದರಿಂದ ಮುಕ್ತಿ ಹೊಂದಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು.
— ಡಾ. ಎಚ್.ಅಶೋಕ್. ಜಿಲ್ಲಾ ಸರ್ಜನ್.