'ಗೋಡೆಗೆ ನೇತುಬಿದ್ದ ಭೂಪಟ' ಕವನ ಸಂಕಲನದ ಕೃತಿಕಾರ, ಬೆಂಗಳೂರಿನ ವೈದ್ಯ ಡಾ. ಲಕ್ಷ್ಮಣ ವಿ.ಎ.
* ಬೆಂಗಳೂರಿನ ವೈದ್ಯ ಡಾ. ಲಕ್ಷ್ಮಣ ವಿ.ಎ. ಅವರ ಕೃತಿ
ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವತಿಯಿಂದ ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಬೆಂಗಳೂರಿನಲ್ಲಿ ವೈದ್ಯರಾಗಿರುವ ಡಾ. ಲಕ್ಷ್ಮಣ ವಿ.ಎ. ಅವರ 'ಗೋಡೆಗೆ ನೇತುಬಿದ್ದ ಭೂಪಟ' ಕವನ ಸಂಕಲನ ಆಯ್ಕೆಯಾಗಿದೆ.
ಡಾ. ಲಕ್ಷ್ಮಣ ಮೂಲತ: ಬೆಳಗಾವಿ ಜಿಲ್ಲೆ ಅಥಣಿ (ಈಗಿನ ಕಾಗವಾಡ) ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಗಳಿಸಿದ್ದಾರೆ. ಓದು, ಕವನ ಸಂಕಲನ, ಗದ್ಯ ಮತ್ತು ಅಂಕಣ ಬರಹಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಸಾಹಿತ್ಯದ ಹವ್ಯಾಸದಿಂದಾಗಿ ಹಲವಾರು ಕವನ ಸಂಕಲನ ಪ್ರಕಟಿಸಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಆಗಸ್ಟ್ ತಿಂಗಳಲ್ಲಿ ನಡೆಯಲಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.