ಉಡುಪಿ ಮಣಿಪಾಲದ ಮಾಹೆ ವಿವಿಯ ಸಹ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಕರುಣಾಕರ್ ಎ. ಕೋಟೆಗಾರ್ ಅವರನ್ನು ಮಾಹೆ ವಿವಿಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಸ್ವಾಗತಿಸಿದರು.
* ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗ
ಉಡುಪಿ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಡಾ. ಕರುಣಾಕರ್ ಎ. ಕೋಟೆಗಾರ್ ನೇಮಕಗೊಂಡಿದ್ದು, ಮಾಹೆವಿವಿಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಸ್ವಾಗತಿಸಿದರು.
ವಿಭಾಗದ ಸಹ ಕುಲಪತಿಯಾಗಿದ್ದ ಡಾ. ನಾರಾಯಣ ಸಭಾಹಿತ್ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಇದೀಗ ಮಾಹೆ ವಿವಿಯ ಸಲಹೆಗಾರರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಶಿಕ್ಷಣತಜ್ಞ, ಆಡಳಿತಗಾರರಾಗಿರುವ ಡಾ. ಕೋಟೆಗಾರ್, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ, ಸಂಶೋಧನೆ, ಶೈಕ್ಷಣಿಕ ನಾಯಕತ್ವ ಮತ್ತು ಅಂತಾರಾಷ್ಟ್ರೀಯ ಸಹಯೋಗಗಳಲ್ಲಿ 29 ವರ್ಷಗಳ ಅನುಭವ ಹೊಂದಿದ್ದಾರೆ. 2024ರ ಅಕ್ಟೋಬರ್ನಿಂದ ಜೈಪುರದ ಮಣಿಪಾಲ್ ಕ್ಯಾಂಪಸ್ನಲ್ಲಿ ಪ್ರೊ ಪ್ರೆಸಿಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಡೇಟಾ ಸೈನ್ಸ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿರುವ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ರ್ಜನಲ್ಗಳು ಹಾಗೂ ಸಮ್ಮೇಳನಗಳ ನಡಾವಳಿಗಳಲ್ಲಿ 75ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಪ್ರಕಟಿಸಿದ್ದಾರೆ. ಒಂಬತ್ತು ಪಿಎಚ್.ಡಿ (ಡಾಕ್ಟರಲ್) ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದು, ಪ್ರಸ್ತುತ ಹಲವು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.
ಪ್ರತಿಷ್ಠಿತ ಇನ್ಸ್ಟಿಟ್ಯೂಟ್ ಆಫ್ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ ಸಂಸ್ಥೆಯ ಹಿರಿಯ ಸದಸ್ಯರಾಗಿ ಹಾಗೂ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ನ ಆಜೀವ ಸದಸ್ಯರಾಗಿದ್ದಾರೆ. ಕರ್ನಾಟಕದ ರಾಜ್ಯಪಾಲರ ನಾಮನಿರ್ದೇಶನದಂತೆ ಜೂನ್ 2020ರಿಂದ ಜೂನ್ 2023ರ ವರೆಗೆ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.