ಉಡುಪಿಯಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್​ನ 'ವಾರ್ತಾ ಸಂಚಯ'ವನ್ನು ಶಿವರಾಜ್​ ಎಸ್​. ತಂಗಡಗಿ ಉದ್ಘಾಟಿಸಿದರು. ಮಂಜುನಾಥ್​ ಪೂಜಾರಿ, ಡಾ.ಗಣನಾಥ್​ ಶೆಟ್ಟಿ ಎಕ್ಕಾರು, ಪೂರ್ಣಿಮಾ, ಜಿ.ಎಂ. ಶರೀಫ್​ ಹೂಡೆ ಇದ್ದರು. 
ಉಡುಪಿ

ವೈಚಾರಿಕ ಪ್ರಜ್ಞೆಯ ಪ್ರತಿನಿಧಿ ಡಾ.ಕಾರಂತರು

ಸಚಿವ ಶಿವರಾಜ್​ ಎಸ್​. ತಂಗಡಗಿ ಅಭಿಪ್ರಾಯ

ಕಾರಂತ ಟ್ರಸ್ಟ್​ನ 'ವಾರ್ತಾ ಸಂಚಯ' ಬಿಡುಗಡೆ

ಉಡುಪಿ: ಡಾ. ಕೋಟ ಶಿವರಾಮ ಕಾರಂತ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶಕ್ಕೆ ಘನತೆ ತಂದವರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಈ ನಾಡಿನಲ್ಲಿ ಸಮಾನತೆ ಪ್ರತಿಪಾದಿಸಿದವರು. ಅವರು ಕರ್ನಾಟಕದ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯ ಪ್ರತಿನಿಧಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್​ ಎಸ್​. ತಂಗಡಗಿ ಅಭಿಪ್ರಾಯಪಟ್ಟರು.

ಉಡುಪಿಯ ಖಾಸಗಿ ರೆಸಾರ್ಟ್​ನಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್​ನ ಕಾರ್ಯಕ್ರಮಗಳ ಕುರಿತಾದ 'ವಾರ್ತಾ ಸಂಚಯ'ವನ್ನು ಶುಕ್ರವಾರ (ಸೆ.25) ಬಿಡುಗಡೆಗೊಳಿಸಿ ಮಾತನಾಡಿದರು.

ಅನುದಾನ ಭರವಸೆ

ವೈಚಾರಿಕ ಧಾರೆಗಳ ಕೊಂಡಿಯಾಗಿರುವ ಡಾ. ಶಿವರಾಮ ಕಾರಂತರ ಕುರಿತು ಮಾಹಿತಿ, ಜಾಗೃತಿ ಮೂಡಿಸುತ್ತಿರುವ ಟ್ರಸ್ಟ್​ನ ಚಟುವಟಿಕೆ ಶ್ಲಾಘನೀಯ. ಅವರ 125ನೇ ಜನ್ಮದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಟ್ರಸ್ಟ್​ನ ವತಿಯಿಂದ ಸಚಿವ ತಂಗಡಗಿ ಅವರನ್ನು ಅಧ್ಯಕ್ಷ ಡಾ.ಗಣನಾಥ್​ ಶೆಟ್ಟಿ ಎಕ್ಕಾರು ಸನ್ಮಾನಿಸಿದರು.

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್​ ಪೂಜಾರಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಹಾಗೂ ಡಾ.ಶಿವರಾಮ ಕಾರಂತ ಟ್ರಸ್ಟ್​ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ, ಟ್ರಸ್ಟ್​ನ ಸದಸ್ಯ ಜಿ.ಎಂ. ಶರೀಫ್​ ಹೂಡೆ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶಿವರಾಮ ಕಾರಂತರ ಕುರಿತು ಶಾಲಾ&ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಲು ಟ್ರಸ್ಟ್​ ವತಿಯಿಂದ ಅರಿವಿನ ಬೆಳಕು, ಅಧ್ಯಯನ ಶಿಬಿರ, ರಂಗವಲ್ಲಿ ಮತ್ತು ಚಿತ್ರಕಲೆಯ ಮೂಲಕ ಕಾರಂತರ ಪರಿಚಯ, ರಾಜ್ಯ&ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ನಡೆಸಲಾಗುತ್ತಿದೆ. ಎಲ್ಲ ಕಾರ್ಯಕ್ರಮಗಳೂ ಪ್ರಶಂಸೆಗೆ ಪಾತ್ರವಾಗಿದೆ.
ಡಾ. ಗಣನಾಥ್​ ಶೆಟ್ಟಿ ಎಕ್ಕಾರು. ಡಾ.ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ.