ಉಡುಪಿ: ಡಾ. ಶಿವರಾಮ ಕಾರಂತರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಯಾವುದೇ ವಿಚಾರವನ್ನು ವೈಜ್ಞಾನಿಕ ಮತ್ತು ವೈಚಾರಿಕವಾಗಿ ಗಮನಿಸುತ್ತಿದ್ದರು. ಯಾವುದೇ ವಿಚಾರಗಳ ಕುರಿತು ಅವರಿಗಿದ್ದ ಮುಂದಾಲೋಚನೆ ಬೆರಗುಗೊಳಿಸುತ್ತದೆ. ಆ ದೃಷ್ಟಿಯಿಂದಲೇ ಕಾರಂತರನ್ನು ಶತಮಾನದ ಸಾಹಿತ್ಯ ವಿಜ್ಞಾನಿ ಎನ್ನಬಹುದು ಎಂದು ಜಾನಪದ ಖ್ಯಾತ ವಿದ್ವಾಂಸ ಮತ್ತು ಚಿಂತಕ ಡಾ.ಗಣೇಶ್ ಅಮೀನ್ ಸಂಕಮಾರ್ ಅಭಿಪ್ರಾಯಪಟ್ಟರು.
ಉಡುಪಿ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ರೆಡ್ ಕ್ರಾಸ್ ಭವನದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಶುಕ್ರವಾರ (ಅ.9) ಆಯೋಜಿಸಿದ್ದ ಕಾರಂತರ 124ನೇ ಜನ್ಮದಿನಾಚರಣೆ ಮತ್ತು ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಾಯಿಯ ಪ್ರೀತಿಯಿತ್ತು
ಕಾರಂತರೊಂದಿಗಿನ ಒಡನಾಟದ ಕುರಿತಾಗಿ ಚಿಂತಕ ಸಂಕಯ್ಯ ಶೆಟ್ಟಿ ಮಾತನಾಡಿ, ಬಹುಜನರು ಕಾರಂತರು ಕೋಪಿಷ್ಟ ಎಂದು ತಪ್ಪು ತಿಳಿದಿದ್ದಾರೆ. ಅವರದ್ದು ಸಾತ್ವಿಕ ಸಿಟ್ಟು ಆ ಸಿಟ್ಟಿನೊಳಗೆ ಮಗುವಿನ ಮುಗ್ಧತೆ ಮತ್ತು ತಾಯಿಯ ಪ್ರೀತಿ ಇತ್ತು ಎಂದರು.
ಕರಾವಳಿ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ್ ಮಾತನಾಡಿ, ಕಾರಂತರ ಬರಹಗಳಲ್ಲಿನ ವಿವಿಧ ತಾತ್ವಿಕತೆಗಳ ಆಯಾಮ ವಿವರಿಸಿದರು.
ಮಣಿಪಾಲ ರೇಡಿಯೋ ಸಂಯೋಜಕಿ ಹಾಗೂ ಸಹಾಯಕ ಪ್ರಾಧ್ಯಪಕಿ ಡಾ.ರಶ್ಮಿ ಅಮ್ಮೆಂಬಳ ಮಾತನಾಡಿ, ಕಾರಂತರ ಕುರಿತಾದ ವಿವಿಧ ಲೇಖಕರ ವಿಚಾರಗಳು 'ಕಾರಂತಯಾನ' ಹೆಸರಿನಲ್ಲಿ 35 ಕಂತುಗಳಲ್ಲಿ ಪ್ರಕಟವಾಗಿದೆ ಎಂದು ತಿಳಿಸಿದರು.
ಡಾ.ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ.ಗಣನಾಥ್ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಕಾರಂತರ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಟ್ರಸ್ಟ್ನ ಸದಸ್ಯರಾದ ಆತ್ರಾಡಿ ಅಮೃತಾ ಶೆಟ್ಟಿ, ಡಾ.ಭಾರತಿ ಮರವಂತೆ, ಸಂತೋಷ್ ನಾಯಕ್ ಪಟ್ಲ, ಜಿ.ಎಂ. ಶರೀಫ್ ಹೂಡೆ, ಡಾ.ಪ್ರಸಾದ್ ರಾವ್ ಉಪಸ್ಥಿತರಿದ್ದರು.
ಟಸ್ಟ್ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ಚೇತನ್ ಶೆಟ್ಟಿ ಕೋವಾಡಿ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಕೊಡವೂರು ವಂದಿಸಿದರು.