ಅಮೆರಿಕನ್ ಅಕಾಡೆಮಿ ಆಫ್ ನರ್ಸಿಂಗ್ (ಎಎಎನ್)ನ ಪ್ರತಿಷ್ಠಿತ 'ಫೆಲೋ' ಆಗಿ ಆಯ್ಕೆಯಾದ ಉಡುಪಿಯ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ (ಎಂಸಿಒಎನ್-ಎಂಕಾನ್)ನ ಡೀನ್ ಡಾ. ಜುಡಿತ್ ಏಂಜಲಿಟಾ ನೊರೊನ್ಹಾ.
* ಎಎಎನ್ ಫೆಲೋ ಆಗಿ ಡಾ. ಜುಡಿತ್ ಎ. ನೊರೊನ್ಹಾ ಆಯ್ಕೆ
ಉಡುಪಿ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಅಂಗಸಂಸ್ಥೆಯಾದ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ (ಎಂಸಿಒಎನ್-ಎಂಕಾನ್)ನ ಡೀನ್ ಡಾ. ಜುಡಿತ್ ಏಂಜಲಿಟಾ ನೊರೊನ್ಹಾ ಅವರು ಅಮೆರಿಕನ್ ಅಕಾಡೆಮಿ ಆಫ್ ನರ್ಸಿಂಗ್ (ಎಎಎನ್)ನ 2026ನೇ ಸಾಲಿನ ಪ್ರತಿಷ್ಠಿತ 'ಫೆಲೋ' ಆಗಿ ಆಯ್ಕೆಯಾಗಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಜಾಗತಿಕ ನರ್ಸಿಂಗ್ ಸಾಧಕರನ್ನು ಗುರುತಿಸಿ 'ಅಮೆರಿಕನ್ ಅಕಾಡೆಮಿ ಆಫ್ ನರ್ಸಿಂಗ್ (ಎಎಎನ್)' ತನ್ನ 2026ನೇ ಸಾಲಿನ ಫೆಲೋ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಅಮೆರಿಕದ 39 ರಾಜ್ಯ, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಹಾಗೂ 17 ದೇಶಗಳ ಪ್ರಖ್ಯಾತ ನರ್ಸಿಂಗ್ ನಾಯಕರು ಸ್ಥಾನ ಗಳಿಸಿದ್ದಾರೆ.
ಡಾ. ನೊರೊನ್ಹಾ ಅವರ ಆಯ್ಕೆಯು ಜಾಗತಿಕ ನರ್ಸಿಂಗ್ ಸಾಧಕರ ಅಂತಾರಾಷ್ಟ್ರೀಯ ಶ್ರೇಷ್ಠ ಕೂಟದಲ್ಲಿ ಅವರಿಗೆ ಗೌರವಾನ್ವಿತ ಸ್ಥಾನ ತಂದುಕೊಟ್ಟಿದೆ. 2026ನೇ ಸಾಲಿನ ಫೆಲೋಗಳ ಅಧಿಕೃತ ಸೇರ್ಪಡೆ ಕಾರ್ಯಕ್ರಮವು ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ ಅ. 8ರಿಂದ 10ರ ವರೆಗೆ ನಡೆಯಲಿದೆ. ಅಮೆರಿಕನ್ ಅಕಾಡೆಮಿ ಆಫ್ ನರ್ಸಿಂಗ್ನ 'ಹೆಲ್ತ್ ಪಾಲಿಸಿ ಕಾನ್ಫರೆನ್ಸ್' (ಆರೋಗ್ಯ ನೀತಿ ಸಮ್ಮೇಳನ)ನ ಕೊನೆಯ ದಿನ ಪದಗ್ರಹಣ ಸಮಾರಂಭ ನೆರವೇರಲಿದೆ.
ಒಗ್ಗಟ್ಟಿನ ಶ್ರಮಕ್ಕೆ ಸಂದ ಜಯ
ಪ್ರತಿಷ್ಠಿತ 'ಫೆಲೋ' ಆಗಿ ಆಯ್ಕೆಯಾಗಿರುವ ಡಾ. ಜುಡಿತ್ ಏಂಜಲಿಟಾ ನೊರೊನ್ಹಾ ಮಾತನಾಡಿ, ಅಮೆರಿಕದ ಫೆಲೋಶಿಪ್ ಲಭಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಇದು ನನ್ನ ವೈಯಕ್ತಿಕ ಸಾಧನೆಯಷ್ಟೇ ಅಲ್ಲ. ನನ್ನ ವೃತ್ತಿ ಹಾಗೂ ಶೈಕ್ಷಣಿಕ ಪಯಣದಲ್ಲಿ ಬೆಂಬಲಿಸಿದ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಕರ ಒಗ್ಗಟ್ಟಿನ ಶ್ರಮಕ್ಕೆ ಸಂದ ಜಯ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
"
ಡಾ. ಜುಡಿತ್ ಏಂಜಲಿಟ್ಟಾ ನೊರೊನ್ಹಾ ಅವರ ಈ ಸಾಧನೆ ಮಾಹೆ ಮತ್ತು ಭಾರತೀಯ ನರ್ಸಿಂಗ್ ಸಮುದಾಯಕ್ಕೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಗೌರವ ಇದಾಗಿದೆ. ಹಲವು ದಶಕಗಳಿಂದ ಡಾ. ನೊರೊನ್ಹಾ ಅವರು ನರ್ಸಿಂಗ್ ಶಿಕ್ಷಣ, ಸಂಶೋಧನೆ ಮತ್ತು ನಾಯಕತ್ವಕ್ಕೆ ನೀಡಿದ ಕೊಡುಗೆಗಳಿಗೆ ಸಂದ ಮನ್ನಣೆಯಾಗಿದೆ.
— ಡಾ. ಶರತ್ ಕೆ. ರಾವ್. ಮಾಹೆ ಕುಲಪತಿ.