ಉಡುಪಿ: ಕುಂದಾಪುರ ತಾಲೂಕು ಕೆದೂರಿನ ಶಾನಾಡಿ ಕೊರಗ ಕಾಲನಿಯಲ್ಲಿ ಇತ್ತೀಚೆಗೆ ನಡೆದ ಆತ್ಮಹತ್ಯೆ ಪ್ರಕರಣದಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ಬಾಲಕ ಸುಶಾಂತ ಎಂಬಾತನ ಮುಂದಿನ ಶಿಕ್ಷಣಕ್ಕಾಗಿ ಜಿ. ಶಂಕರ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಾಡೋಜ ಡಾ. ಜಿ. ಶಂಕರ ಅವರು 5 ಲಕ್ಷ ರೂ. ನೆರವಿನ ಠೇವಣಿ ಪತ್ರ ಹಸ್ತಾಂತರಿಸಿದರು.
ಕೋಟ ಸಮುದ್ಯತಾ ಹಾಲ್ನಲ್ಲಿ ಸುಶಾಂತ ಮತ್ತು ಆತನ ತಂದೆ ಸುಧಾಕರ ಅವರಿಗೆ ಆರ್ಥಿಕ ನೆರವು ನೀಡಿ ಸಹಕರಿಸಿ, ಮಾನವೀಯತೆ ಮೆರೆದರು.
ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ರವೀಶ ಎಸ್. ಕೊರವಡಿ, ನಿಕಟಪೂರ್ವ ಅಧ್ಯಕ್ಷ ಜಯಂತ ಅಮೀನ್, ಮಾಜಿ ಅಧ್ಯಕ್ಷರಾದ ಶಿವರಾಮ ಕೆ.ಎಂ., ಗಣೇಶ ಕಾಂಚನ್, ರಾಜೇಂದ್ರ ಸುವರ್ಣ, ಕೋಟೇಶ್ವರ ಘಟಕದ ಅಧ್ಯಕ್ಷರಾದ ರಾಘವೇಂದ್ರ ಹರಪನಕೆರೆ, ಸುರೇಶ ಶಾನಾಡಿ, ಸಂಜೀವ ಎಂ.ಎಸ್., ಸುರೇಶ ಕಾಂಚನ್ ಬಾರಿಕೆರೆ, ಸುರೇಶ ಕೋಟ, ರಮೇಶ ವಿ. ಕುಂದರ್, ಗಿರೀಶ ಬಂಗೇರ, ಧನುಷ್, ತಿಮ್ಮ ಕಾಂಚನ್ ಇನ್ನಿತರರು ಉಪಸ್ಥಿತರಿದ್ದರು.
ಕೆದೂರು ಶಾನಾಡಿಯ ಕೊರಗ ಕಾಲನಿಯಲ್ಲಿರುವ ನೇತ್ರಾವತಿ ಮತ್ತು ಸುಧಾಕರ ದಂಪತಿಯ ಪುತ್ರಿ 14 ವರ್ಷದ ಸುಪ್ರತಿ ಅಂಗವೈಕಲ್ಯತೆ ಹಾಗೂ ಆನಾರೋಗ್ಯದಿಂದ ಬಳಲುತ್ತಿದ್ದಳು. ಹೀಗಾಗಿ ಇತ್ತೀಚೆಗೆ ತಾಯಿ ನೇತ್ರಾವತಿ ಅವರು ಮಗಳನ್ನು ಕೊಲೆಗೈದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವರ 3 ವರ್ಷದ ಮಗ ಸುಶಾಂತನ ಮುಂದಿನ ಭವಿಷ್ಯ ಹಾಗೂ ವಿದ್ಯಾಭ್ಯಾಸಕ್ಕಾಗಿ 5 ಲಕ್ಷ ರೂ. ಠೇವಣಿ ಇಟ್ಟಿದ್ದೇನೆ. ಅದು 15 ವರ್ಷದ ಬಳಿಕ 18 ವರ್ಷದವನಾಗುವ ಸುಶಾಂತನಿಗೆ ಸುಮಾರು -12 ಲಕ್ಷ ರೂ. ಲಭಿಸಲಿದೆ. ಆ ಮೊತ್ತವು ಮುಂದಿನ ವಿದ್ಯಾಭ್ಯಾಸಕ್ಕೆ ಅಥವಾ ಜೀವನಕ್ಕೆ ನೆರವಾಗಲಿದೆ. ತಾಯಿಯನ್ನು ಕಳೆದುಕೊಂಡ ಆ ಬಾಲಕನ ಬದುಕಿಗೆ ಶಿಕ್ಷಣದ ಮೂಲಕ ಹೊಸ ಭರವಸೆ ಮತ್ತು ಭದ್ರತೆ ಕಲ್ಪಿಸುವುದು ಈ ನೆರವಿನ ಉದ್ದೇಶ ಎಂದು ಡಾ. ಜಿ.ಶಂಕರ ತಿಳಿಸಿದರು.