ಟಿ.ಎ. ಪೈ ಮೆನೇಜ್ಮೆಂಟ್ ಇನ್ಸ್ಟಿಟ್ಯೂಟ್ (ಟ್ಯಾಪ್ಮಿ)ನ ನೂತನ ನಿರ್ದೇಶಕರಾಗಿ ನೇಮಕಗೊಂಡ ಡಾ. ದೇಬಸಿಸ್ ಪ್ರಧಾನ್.
* ಉದ್ಯಮ ರಂಗಕ್ಕೆ ಪೂರಕ ಮೆನೇಜ್ಮೆಂಟ್ ಶಿಕ್ಷಣ ಒದಗಿಸುವ ಜವಾಬ್ದಾರಿ
ಉಡುಪಿ: ಪ್ರಸಿದ್ಧ ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಡೀಮ್ಡ್ ವಿಶ್ವವಿದ್ಯಾಲಯವಾದ ಮಾಹೆ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಟಿ.ಎ. ಪೈ ಮೆನೇಜ್ಮೆಂಟ್ ಇನ್ಸ್ಟಿಟ್ಯೂಟ್ (ಟ್ಯಾಪ್ಮಿ)ನ ನೂತನ ನಿರ್ದೇಶಕರಾಗಿ ಡಾ. ದೇಬಸಿಸ್ ಪ್ರಧಾನ್ ನೇಮಕಗೊಂಡಿದ್ದಾರೆ.
ನೂತನ ನಿರ್ದೇಶಕ ಡಾ. ಪ್ರಧಾನ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಹಿನ್ನೆಲೆ ಹೊಂದಿದ್ದು, ಜಮ್ಶೆಡ್ಪುರದ ಪ್ರತಿಷ್ಠಿತ ಎಕ್ಸ್ಎಲ್ಆರ್ಐ ಸಂಸ್ಥೆಯಲ್ಲಿ 20ಕ್ಕೂ ಹೆಚ್ಚು ವರ್ಷ ಮಾರ್ಕೆಟಿಂಗ್ ವಿಭಾಗದ ಪೂರ್ಣಾವಧಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಅಲ್ಲಿನ ಅಸೋಸಿಯೇಟ್ ಡೀನ್ (ಎಕ್ಸಿಕ್ಯೂಟಿವ್ ಎಜುಕೇಶನ್) ಹಾಗೂ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾಗಿಯೂ ವಿವಿಧ ಜವಾಬ್ದಾರಿಯುತ ಹುದ್ದೆ ನಿಭಾಯಿಸಿದ ಅನುಭವ ಹೊಂದಿದ್ದಾರೆ.
ಶೈಕ್ಷಣಿಕ ಉತ್ಕಷ್ಟತೆ, ಜಾಗತಿಕ ಮಟ್ಟದಲ್ಲಿ ಸಂಸ್ಥೆಯ ಘನತೆ ಹೆಚ್ಚಿಸುವುದು, ಮುಂಚೂಣಿ ಸಂಶೋಧನೆ ಹಾಗೂ ಪ್ರಸ್ತುತ ಉದ್ಯಮ ರಂಗಕ್ಕೆ ಪೂರಕವಾಗಿ ಮೆನೇಜ್ಮೆಂಟ್ ಶಿಕ್ಷಣ ಒದಗಿಸುವ ಸಂಸ್ಥೆಯ ನಿರಂತರ ಬದ್ಧತೆಗೆ ಪೂರಕವಾಗಿ ಈ ನೇಮಕಾತಿ ಮಾಡಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳಲ್ಲದೆ, ಡಾ. ಪ್ರಧಾನ್ ಅವರು ಪ್ರಸ್ತುತ ಸೇಜ್ ಪಬ್ಲಿಕೇಷನ್ಸ್ ಪ್ರಕಟಿಸುವ ಮೆನೇಜ್ಮೆಂಟ್ ಕ್ಷೇತ್ರದ ಪ್ರಮುಖ ನಿಯತಕಾಲಿಕೆಯಾದ ಮೆನೇಜ್ಮೆಂಟ್ ಆ್ಯಂಡ್ ಲೇಬರ್ ಸ್ಟಡಿಸ್ ಜರ್ನಲ್ನ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಸ್ಪ್ರಿಂಗರ್ ನೇಚರ್ ಪ್ರಕಟಿಸುವ ಹ್ಯುಮಾನಿಟೀಸ್ ಆ್ಯಂಡ್ ಸೋಶಿಯಲ್ ಸೈನ್ಸಸ್ ಕಮ್ಯುನಿಕೇಷನ್ಸ್ ಜರ್ನಲ್ನ ಪ್ರಾದೇಶಿಕ ಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಗ್ರಾಹಕರ ಯೋಗಕ್ಷೇಮ ಮತ್ತು ತಂತ್ರಜ್ಞಾನ, ಗ್ರಾಹಕರು-ಬ್ರ್ಯಾಂಡ್ ಗಳು ಮತ್ತು ಯಂತ್ರಗಳ ನಡುವಿನ ಪರಸ್ಪರ ಸಂವಹನ, ಇನ್ ಫ್ಲುಯೆನ್ಸರ್ ಮಾರ್ಕೆಟಿಂಗ್, ಬ್ರ್ಯಾಂಡ್ ಆಕ್ಟಿವಿಸಂ ಹಾಗೂ ಗ್ರಾಹಕರೊಂದಿಗಿನ ಒಡನಾಟ ಇವರ ಪ್ರಮುಖ ಸಂಶೋಧನಾ ಕ್ಷೇತ್ರಗಳಾಗಿವೆ. ಪ್ರಸ್ತುತ ಹಲವು ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.